ಬೈರೂತ್: ಇಸ್ರೇಲ್ ಮತ್ತು ಲೆಬನಾನ್ ನಡುವಿನ ಕದನ ವಿರಾಮವನ್ನು (Ceasefire) ಇತ್ತೀಚೆಗಷ್ಟೇ ಮೂರು ವಾರಗಳವರೆಗೆ ವಿಸ್ತರಿಸಲಾಗಿತ್ತು. ಆದರೆ ಈ ಒಪ್ಪಂದದ ನಡುವೆಯೇ ಇಸ್ರೇಲ್ ಪಡೆಗಳು ದಕ್ಷಿಣ ಲೆಬನಾನ್‌ನ ಖಿಯಾಮ್ (Khiam) ಮತ್ತು ಯೋಹ್ಮೋರ್ ಅಲ್-ಶಕೀಫ್ (Yohmor al-Shaqif) ಪ್ರಾಂತ್ಯಗಳ ಮೇಲೆ ಶನಿವಾರ ನಸುಕಿನ ವೇಳೆಯಲ್ಲಿ ಹೊಸ ದಾಳಿಗಳನ್ನು ನಡೆಸಿವೆ.
ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯ ನಂತರ ಕದನ ವಿರಾಮವನ್ನು ವಿಸ್ತರಿಸಲಾಗಿತ್ತು. ಆದರೆ ಈ ದಾಳಿಯು ಶಾಂತಿ ಪ್ರಕ್ರಿಯೆಗೆ ಮತ್ತೆ ಹಿನ್ನಡೆ ಉಂಟುಮಾಡುವ ಸಾಧ್ಯತೆ ಇದೆ.
ಇಸ್ರೇಲ್ ರಕ್ಷಣಾ ಪಡೆಗಳ (IDF) ಪ್ರಕಾರ, ದಕ್ಷಿಣ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಉಗ್ರರು ರಾಕೆಟ್ ಲಾಂಚರ್‌ಗಳನ್ನು ಅಳವಡಿಸಿದ್ದರು. ಇದು ಇಸ್ರೇಲಿ ನಾಗರಿಕರಿಗೆ ಮತ್ತು ಗಡಿಯಲ್ಲಿರುವ ಸೈನಿಕರಿಗೆ ನೇರ ಬೆದರಿಕೆಯಾಗಿದ್ದರಿಂದ ‘ಸ್ವರಕ್ಷಣಾ’ ದೃಷ್ಟಿಯಿಂದ ಈ ದಾಳಿ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇಸ್ರೇಲ್ ಉದ್ದೇಶಪೂರ್ವಕವಾಗಿ ನಾಗರಿಕರ ವಸತಿ ಪ್ರದೇಶಗಳನ್ನು ಗುರಿಯಾಗಿಸುತ್ತಿದೆ ಮತ್ತು ಕದನ ವಿರಾಮ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದು ಲೆಬನಾನ್ ಸರ್ಕಾರ ಆರೋಪಿಸಿದೆ.








