ತೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಶಮನಗೊಳಿಸುವ ಪ್ರಯತ್ನಗಳಿಗೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಅಮೆರಿಕ ವಿಧಿಸಿರುವ ಕಠಿಣ ಒತ್ತಡ ಮತ್ತು ಬೆದರಿಕೆಗಳ ನಡುವೆ ಯಾವುದೇ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಇರಾನ್‌ನ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ಸ್ಪಷ್ಟಪಡಿಸಿದ್ದಾರೆ. ಅಮೆರಿಕವು ಸಂಧಾನದ ಮೇಜನ್ನು “ಶರಣಾಗತಿಯ ವೇದಿಕೆ”ಯನ್ನಾಗಿ ಬದಲಿಸಲು ಯತ್ನಿಸುತ್ತಿದೆ ಎಂದು ಇರಾನ್ ಗಂಭೀರ ಆರೋಪ ಮಾಡಿದೆ.
ಅಮೆರಿಕವು ತನ್ನ ಬೆದರಿಕೆ ತಂತ್ರ ಮತ್ತು ನೌಕಾಪಡೆಯ ದಿಗ್ಬಂಧನವನ್ನು ಕೈಬಿಟ್ಟರೆ ಮಾತ್ರ ಪಾಕಿಸ್ತಾನದಲ್ಲಿ ನಡೆಯಲಿರುವ ಮಾತುಕತೆಯಲ್ಲಿ ಭಾಗವಹಿಸುವುದಾಗಿ ಇರಾನ್ ತಿಳಿಸಿದೆ.
“ನಾವು ಚರ್ಚೆಗೆ ಸಿದ್ಧವಿದ್ದೇವೆ, ಆದರೆ ಅದು ಸಮಾನ ಗೌರವದೊಂದಿಗೆ ಇರಬೇಕೇ ಹೊರತು ಶರಣಾಗತಿಗಾಗಿ ಅಲ್ಲ. ಅಮೆರಿಕವು ಪ್ರತಿದಿನ ಹೊಸ ಅಡೆತಡೆಗಳನ್ನು ಸೃಷ್ಟಿಸುತ್ತಿದೆ” ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗರ್ ಗಾಲಿಬಾಫ್ ಕಿಡಿಕಾರಿದ್ದಾರೆ.
ಇತ್ತೀಚೆಗೆ ಅಮೆರಿಕದ ನೌಕಾಪಡೆಯು ಇರಾನ್‌ನ ‘ತೌಸ್ಕಾ’ (Touska) ಸರಕು ಹಡಗನ್ನು ವಶಪಡಿಸಿಕೊಂಡಿರುವುದು ಈ ಬಿಕ್ಕಟ್ಟನ್ನು ಮತ್ತಷ್ಟು ಕೆರಳಿಸಿದೆ. ಇದನ್ನು ಇರಾನ್ “ಕಡಲ್ಗಳ್ಳತನ” ಎಂದು ಕರೆದಿದ್ದು, ವಿಶ್ವಸಂಸ್ಥೆಗೆ ದೂರನ್ನು ನೀಡಿದೆ.
ಇರಾನ್ ಮತ್ತು ಅಮೆರಿಕ ನಡುವೆ ಸದ್ಯ ಕದನ ವಿರಾಮ ಜಾರಿಯಲ್ಲಿದ್ದರೂ, ಅದು ಅತ್ಯಂತ ಸೂಕ್ಷ್ಮ ಹಂತದಲ್ಲಿದೆ. ಪಾಕಿಸ್ತಾನ ಸರ್ಕಾರವು ಎರಡು ದೇಶಗಳ ನಡುವೆ ಸಮನ್ವಯ ಸಾಧಿಸಲು ಪ್ರಯತ್ನಿಸುತ್ತಿದ್ದು, ಅಮೆರಿಕ ವಿಧಿಸಿರುವ ಸಮುದ್ರ ಮಾರ್ಗದ ದಿಗ್ಬಂಧನವನ್ನು ಸಡಿಲಿಸುವಂತೆ ಮನವಿ ಮಾಡಿದೆ.








