ನವದೆಹಲಿ: ಪಶ್ಚಿಮ ಆಫ್ರಿಕಾದ ಮಾಲಿ ದೇಶದಲ್ಲಿ ಭದ್ರತಾ ಸ್ಥಿತಿ ಹದಗೆಡುತ್ತಿದ್ದು, ಸರಣಿ ಸಶಸ್ತ್ರ ದಾಳಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ವಾಸಿಸುತ್ತಿರುವ ಭಾರತೀಯ ನಾಗರಿಕರಿಗೆ ಭಾರತೀಯ ರಾಯಭಾರ ಕಚೇರಿಯು ತುರ್ತು ‘ಪ್ರವಾಸ ಮತ್ತು ಭದ್ರತಾ ಸಲಹೆ’ಯನ್ನು (Travel Advisory) ಬಿಡುಗಡೆ ಮಾಡಿದೆ. ಮಾಲಿಯ ಕಾಟಿ (Kati) ಸೇರಿದಂತೆ ವಿವಿಧ ಭಾಗಗಳಲ್ಲಿ ಶನಿವಾರ ನಡೆದ ಸಂಘಟಿತ ದಾಳಿಗಳ ನಂತರ ಈ ಮುನ್ನೆಚ್ಚರಿಕೆ ನೀಡಲಾಗಿದೆ.
ಮಾಲಿಯಲ್ಲಿರುವ ಎಲ್ಲಾ ಭಾರತೀಯರು ಸದ್ಯದ ಪರಿಸ್ಥಿತಿ ತಿಳಿಯಾಗುವವರೆಗೆ ಮನೆಯಲ್ಲೇ ಇರಬೇಕು ಮತ್ತು ಅನಗತ್ಯ ಓಡಾಟವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಸೂಚಿಸಲಾಗಿದೆ.
ರಾಯಭಾರ ಕಚೇರಿಯು ಭಾರತೀಯರು “ಅತೀವ ಜಾಗರೂಕತೆ” (Highly Vigilant) ವಹಿಸುವಂತೆ ಮತ್ತು ಸ್ಥಳೀಯ ಅಧಿಕಾರಿಗಳು ಕಾಲಕಾಲಕ್ಕೆ ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದೆ.
ಭಾರತೀಯ ನಾಗರಿಕರು ರಾಯಭಾರ ಕಚೇರಿಯ ಅಧಿಕೃತ ವೆಬ್‌ಸೈಟ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ನಿರಂತರವಾಗಿ ಮಾಹಿತಿ ಪಡೆಯುತ್ತಿರಬೇಕು ಎಂದು ತಿಳಿಸಲಾಗಿದೆ.
ಯಾವುದೇ ತುರ್ತು ಸಂದರ್ಭದಲ್ಲಿ ಅಥವಾ ಸಹಾಯಕ್ಕಾಗಿ ಭಾರತೀಯರು ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು:
+223 78486019
+223 94793705







