ತೆಲ್ ಅವಿವ್: ಇರಾನ್ ಮತ್ತು ಇಸ್ರೇಲ್ ನಡುವೆ ದಾಳಿ-ಪ್ರತಿ ದಾಳಿಗಳು ಮತ್ತೆ ತೀವ್ರಗೊಂಡಿವೆ. ಇಸ್ರೇಲ್ ಪಡೆಗಳು ಇರಾನ್ನ ಮಹ್ಶಹರ್ನಲ್ಲಿರುವ ಪೆಟ್ರೋಕೆಮಿಕಲ್ ಸ್ಥಾವರ ಮತ್ತು ಅಲ್ಲಿನ ಹಲವು ಮೂಲಸೌಕರ್ಯ ತಾಣಗಳ ಮೇಲೆ ದಾಳಿ ನಡೆಸಿದರೆ, ಅದಕ್ಕೆ ಪ್ರತಿಯಾಗಿ ಇರಾನ್ ಇಸ್ರೇಲ್ನ ಹೈಫಾದಲ್ಲಿರುವ ಇದೇ ರೀತಿಯ ಸೌಲಭ್ಯಗಳ ಮೇಲೆ ದಾಳಿ ನಡೆಸಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಉಭಯ ದೇಶಗಳಲ್ಲಿ ನೆಲೆಸಿರುವ ಭಾರತೀಯ ನಾಗರಿಕರ ಸುರಕ್ಷತೆ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ.
ಸೋಮವಾರ ಬಿಡುಗಡೆ ಮಾಡಲಾದ ಸಲಹಾ ಸೂಚನೆಯಲ್ಲಿ (Advisory), ತೆಲ್ ಅವಿವ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯರು ಭಯಪಡಬಾರದು, ಆದರೆ ಜಾಗರೂಕರಾಗಿರಬೇಕು ಎಂದು ಮನವಿ ಮಾಡಿದೆ. ಅಲ್ಲದೆ, ಇಸ್ರೇಲ್ ಅಧಿಕಾರಿಗಳು ನೀಡಿರುವ ಎಲ್ಲಾ ಸುರಕ್ಷತಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದೆ.
”ಪ್ರದೇಶದಲ್ಲಿನ ಪ್ರಸ್ತುತ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇಸ್ರೇಲ್ನಲ್ಲಿರುವ ಎಲ್ಲಾ ಭಾರತೀಯ ನಾಗರಿಕರು ಅತ್ಯಂತ ಎಚ್ಚರಿಕೆಯಿಂದ ಇರಬೇಕು ಮತ್ತು ಸದಾ ಜಾಗರೂಕರಾಗಿರಬೇಕು” ಎಂದು ರಾಯಭಾರ ಕಚೇರಿ ತಿಳಿಸಿದೆ. ಮುಂದಿನ ಸೂಚನೆ ಬರುವವರೆಗೆ ದೇಶದೊಳಗೆ ಅನಗತ್ಯ ಪ್ರಯಾಣ ಮಾಡದಂತೆಯೂ ಭಾರತೀಯರಿಗೆ ಸಲಹೆ ನೀಡಲಾಗಿದೆ. ಅಲ್ಲದೆ, ಸ್ಥಳೀಯ ಸುದ್ದಿಗಳನ್ನು, ಅಧಿಕೃತ ಘೋಷಣೆಗಳನ್ನು ಮತ್ತು ತುರ್ತು ಎಚ್ಚರಿಕೆಗಳನ್ನು ನಿಯಮಿತವಾಗಿ ಗಮನಿಸುವಂತೆ ಸೂಚಿಸಲಾಗಿದೆ.
ಇರಾನ್ನ ಸಶಸ್ತ್ರ ಪಡೆಗಳು ಶಸ್ತ್ರಾಸ್ತ್ರ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ಉತ್ಪಾದಿಸಲು ಮತ್ತು ರಫ್ತು ಮಾಡಲು ಬಳಸುತ್ತಿದ್ದ ಮಹ್ಶಹರ್ನ ಪೆಟ್ರೋಕೆಮಿಕಲ್ ಸಂಕೀರ್ಣದ ಹಲವು ಮೂಲಸೌಕರ್ಯ ತಾಣಗಳ ಮೇಲೆ ತಾವು ದಾಳಿ ನಡೆಸಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ. ಇಸ್ರೇಲ್ ತನ್ನ ಪೆಟ್ರೋಕೆಮಿಕಲ್ ವಲಯದ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ, ಹೈಫಾದಲ್ಲಿರುವ ಅದೇ ರೀತಿಯ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡಿದ್ದಾಗಿ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿಕೊಂಡಿದೆ.
ಇಸ್ರೇಲ್ನ ಈ ದಾಳಿಯು, ಒಂದು ದಿನದ ಹಿಂದೆ ಉತ್ತರ ಇಸ್ರೇಲ್ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಗೆ ಪ್ರತಿಕ್ರಿಯೆಯಾಗಿದೆ ಎಂದು ಇಸ್ರೇಲ್ ತಿಳಿಸಿದೆ. ಇನ್ನು, ಬೈರುತ್ನಲ್ಲಿ ಇಸ್ರೇಲ್ ನಡೆಸಿದ ಹೆಜ್ಬುಲ್ಲಾ ವಿರೋಧಿ ಕಾರ್ಯಾಚರಣೆಯ ನಂತರ ಇರಾನ್ ಆ ಕ್ಷಿಪಣಿ ದಾಳಿ ನಡೆಸಿತ್ತು.
ಏಪ್ರಿಲ್ 8 ರಂದು ತಾತ್ಕಾಲಿಕ ಕದನ ವಿರಾಮ ಒಪ್ಪಂದ ಏರ್ಪಟ್ಟಿದ್ದರೂ, ಅದರ ಅನುಷ್ಠಾನದಲ್ಲಿನ ಭಿನ್ನಾಭಿಪ್ರಾಯಗಳು ಮತ್ತು ನಂತರದ ಪ್ರಾದೇಶಿಕ ಬೆಳವಣಿಗೆಗಳಿಂದಾಗಿ ಮಾತುಕತೆಗಳು ಸ್ಥಗಿತಗೊಂಡಿವೆ.








