ನ್ಯೂಯಾರ್ಕ್: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಸಂಘರ್ಷದ ನಡುವೆ, ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ವಾಣಿಜ್ಯ ನೌಕೆಗಳ ಮೇಲೆ ನಡೆಯುತ್ತಿರುವ ಸರಣಿ ದಾಳಿಗಳನ್ನು ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ತೀವ್ರವಾಗಿ ಖಂಡಿಸಿದೆ. ಅಂತರಾಷ್ಟ್ರೀಯ ಜಲಮಾರ್ಗಗಳಲ್ಲಿ ನೌಕಾಯಾನದ ಸ್ವಾತಂತ್ರ್ಯವನ್ನು ತಕ್ಷಣವೇ ಮರುಸ್ಥಾಪಿಸಬೇಕು ಎಂದು ಭಾರತ ಬಲವಾಗಿ ಒತ್ತಾಯಿಸಿದೆ.
ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿಯಾದ ಯೋಜನಾ ಪಟೇಲ್ ಅವರು ಮಾತನಾಡಿ, “ವಾಣಿಜ್ಯ ನೌಕೆಗಳನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ದಾಳಿಗಳು ಸ್ವೀಕಾರಾರ್ಹವಲ್ಲ. ಇದು ಜಾಗತಿಕ ಇಂಧನ ಭದ್ರತೆ ಮತ್ತು ಆರ್ಥಿಕ ಸ್ಥಿರತೆಗೆ ದೊಡ್ಡ ಬೆದರಿಕೆಯಾಗಿದೆ” ಎಂದು ಎಚ್ಚರಿಸಿದ್ದಾರೆ.
ಈ ಸಂಘರ್ಷದ ವೇಳೆ ಹಡಗುಗಳ ಮೇಲೆ ನಡೆದ ದಾಳಿಯಲ್ಲಿ ಭಾರತೀಯ ನಾವಿಕರು ಪ್ರಾಣ ಕಳೆದುಕೊಂಡಿರುವುದಕ್ಕೆ ಭಾರತ ತೀವ್ರ ಸಂತಾಪ ಮತ್ತು ಆಕ್ರೋಶ ವ್ಯಕ್ತಪಡಿಸಿದೆ. ವಿಶ್ವದ ಶೇ. 13ರಷ್ಟು ನಾವಿಕರು ಭಾರತದವರಾಗಿದ್ದು, ಅವರ ಸುರಕ್ಷತೆ ನಮಗೆ ಪರಮ ಆದ್ಯತೆ ಎಂದು ಭಾರತ ಹೇಳಿದೆ.
ಹಾರ್ಮುಜ್ ಜಲಸಂಧಿಯು ಜಾಗತಿಕ ತೈಲ ಪೂರೈಕೆಯ ಪ್ರಮುಖ ಕೇಂದ್ರವಾಗಿದೆ. ಇಲ್ಲಿನ ಸಂಘರ್ಷದಿಂದಾಗಿ ಹಡಗುಗಳ ಸಂಚಾರ ಶೇ. 95ರಷ್ಟು ಕುಸಿದಿದ್ದು, ಇದು ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ.








