ಬಿಷ್ಕೆಕ್ (ಕಿರ್ಗಿಸ್ತಾನ್): ಕಿರ್ಗಿಸ್ತಾನ್‌ನ ಬಿಷ್ಕೆಕ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ (SCO) ರಕ್ಷಣಾ ಸಚಿವರ ಸಭೆಯಲ್ಲಿ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಯೋತ್ಪಾದನೆಯ ವಿರುದ್ಧ ಜಾಗತಿಕ ಸಮರಕ್ಕೆ ಕರೆ ನೀಡಿದ್ದಾರೆ. “ಭಯೋತ್ಪಾದನೆಗೆ ಯಾವುದೇ ರಾಷ್ಟ್ರೀಯತೆ ಅಥವಾ ಧರ್ಮದ ಹಂಗಿಲ್ಲ” ಎಂದು ಅವರು ದೃಢವಾಗಿ ಪ್ರತಿಪಾದಿಸಿದ್ದಾರೆ.
ಭಯೋತ್ಪಾದನೆಯನ್ನು ಯಾವುದೇ ಒಂದು ಧರ್ಮ ಅಥವಾ ದೇಶಕ್ಕೆ ಸೀಮಿತಗೊಳಿಸುವುದು ತಪ್ಪು. ಇದು ಇಡೀ ಮಾನವಕುಲಕ್ಕೆ ಇರುವ ಶತ್ರು ಎಂದು ಅವರು ಎಚ್ಚರಿಸಿದರು.
ಭಯೋತ್ಪಾದನೆಯ ವಿಷಯದಲ್ಲಿ ದೇಶಗಳು ದ್ವಂದ್ವ ನೀತಿಯನ್ನು (Double Standards) ಅನುಸರಿಸಬಾರದು. ಭಯೋತ್ಪಾದನೆಗೆ ಆಶ್ರಯ ನೀಡುವ ಮತ್ತು ಪ್ರಚೋದನೆ ನೀಡುವ ರಾಷ್ಟ್ರಗಳ ವಿರುದ್ಧ ಸಂಘಟಿತ ಕ್ರಮ ಅನಿವಾರ್ಯ ಎಂದು ಅವರು ಒತ್ತಿ ಹೇಳಿದರು.
ಇತ್ತೀಚೆಗೆ ನಡೆದ ‘ಆಪರೇಷನ್ ಸಿಂಧೂರ್’ ಅನ್ನು ಉಲ್ಲೇಖಿಸಿದ ಅವರು, ಭಯೋತ್ಪಾದನೆಯ ಕೇಂದ್ರಬಿಂದುಗಳು ಇನ್ನು ಮುಂದೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಹರಿತವಾದ ಸಂದೇಶವನ್ನು ರವಾನಿಸಿದರು.
ದೇಶದ ಸಾರ್ವಭೌಮತ್ವದ ಮೇಲೆ ದಾಳಿ ಮಾಡುವ ಗಡಿಯಾಚೆಗಿನ ಪ್ರಾಯೋಜಿತ ಭಯೋತ್ಪಾದನೆಯನ್ನು ಸಹಿಸಲು ಸಾಧ್ಯವಿಲ್ಲ. ಇದನ್ನು ಎದುರಿಸಲು ಎಲ್ಲಾ ರಾಷ್ಟ್ರಗಳು ಒಂದಾಗಬೇಕು ಎಂದು ಕರೆ ನೀಡಿದರು.








