ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ (West Asia) ನಡೆಯುತ್ತಿರುವ ಯುದ್ಧದ ಕಿಚ್ಚು ಈಗ ಭಾರತದ ವಿಮಾನಯಾನ ಕ್ಷೇತ್ರದ ಮೇಲೆ ಕಪ್ಪನೆ ನೆರಳು ಬೀರಿದೆ. ತೀವ್ರ ಇಂಧನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟವನ್ನು ರದ್ದುಗೊಳಿಸಬೇಕಾದ ಅನಿವಾರ್ಯತೆ ಎದುರಾಗಬಹುದು ಎಂದು ದೇಶದ ಪ್ರಮುಖ ವಿಮಾನಯಾನ ಸಂಸ್ಥೆಗಳು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ.
ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಪೂರೈಕೆಗೆ ವ್ಯತ್ಯಯ ಉಂಟಾಗಿದೆ. ಇದರಿಂದ ವಿಮಾನ ಇಂಧನ (ATF) ಬೆಲೆ ಏರಿಕೆಯಾಗುವುದರ ಜೊತೆಗೆ ಲಭ್ಯತೆಯೂ ಕಡಿಮೆಯಾಗುತ್ತಿದೆ.
ಇಂಧನ ಪೂರೈಕೆ ಸ್ಥಿರವಾಗಿಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಅಂತರಾಷ್ಟ್ರೀಯ ಮಾತ್ರವಲ್ಲದೆ, ದೇಶೀಯ ವಿಮಾನಗಳ ಹಾರಾಟವನ್ನೂ ಕಡಿತಗೊಳಿಸಬೇಕಾಗುತ್ತದೆ ಎಂದು ಏರ್‌ಲೈನ್ಸ್ ಸಂಸ್ಥೆಗಳು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ತಿಳಿಸಿವೆ.
ಒಂದು ವೇಳೆ ವಿಮಾನಗಳು ಹಾರಾಟ ನಡೆಸಿದರೂ, ಇಂಧನ ದರ ಹೆಚ್ಚಳದ ಹೊರೆಯನ್ನು ಪ್ರಯಾಣಿಕರ ಮೇಲೆ ಹಾಕಬೇಕಾಗಬಹುದು. ಇದರಿಂದ ವಿಮಾನ ಟಿಕೆಟ್ ದರಗಳು ಗಗನಕ್ಕೇರುವ ಸಾಧ್ಯತೆಯಿದೆ.
ತುರ್ತು ಸಂದರ್ಭ ಎದುರಿಸಲು ಇಂಧನ ದಾಸ್ತಾನು ಹೆಚ್ಚಿಸಲು ಮತ್ತು ತೆರಿಗೆ ವಿನಾಯಿತಿ ನೀಡುವಂತೆ ಏರ್‌ಲೈನ್ಸ್ ಸಂಸ್ಥೆಗಳು ಸರ್ಕಾರವನ್ನು ಒತ್ತಾಯಿಸಿವೆ.








