ನವದೆಹಲಿ: ಆರ್ಥಿಕವಾಗಿ ಹಿಂದುಳಿದ ವರ್ಗದ (EWS) ಮಕ್ಕಳಿಗೆ ಶಿಕ್ಷಣ ನೀಡುವ ವಿಚಾರದಲ್ಲಿ ಖಾಸಗಿ ಶಾಲೆಗಳ ಮೊಂಡುತನಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದೆ. ರಾಜ್ಯ ಸರ್ಕಾರಗಳು ಶಿಫಾರಸು ಮಾಡಿದ ಬಡ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಯಾವುದೇ ಖಾಸಗಿ ಶಾಲೆಗಳು ನಿರಾಕರಿಸುವಂತಿಲ್ಲ ಎಂದು ನ್ಯಾಯಾಲಯ ಖಡಕ್ ಆದೇಶ ನೀಡಿದೆ.
ಶಿಕ್ಷಣ ಹಕ್ಕು ಕಾಯ್ದೆಯಡಿ (RTE) ಬಡ ಮತ್ತು ಹಿಂದುಳಿದ ವರ್ಗದ ಮಕ್ಕಳಿಗೆ ಮೀಸಲಿಟ್ಟ ಸೀಟುಗಳನ್ನು ಭರ್ತಿ ಮಾಡುವುದು ಖಾಸಗಿ ಶಾಲೆಗಳ ಜವಾಬ್ದಾರಿಯಾಗಿದೆ. ಇದನ್ನು ಕೇವಲ ಲಾಭದ ಉದ್ದೇಶದಿಂದ ತಡೆಯುವಂತಿಲ್ಲ ಎಂದು ಕೋರ್ಟ್ ಹೇಳಿದೆ.
ರಾಜ್ಯ ಸರ್ಕಾರಗಳು ಅರ್ಹ ವಿದ್ಯಾರ್ಥಿಗಳನ್ನು ಗುರುತಿಸಿ ಖಾಸಗಿ ಶಾಲೆಗಳಿಗೆ ಕಳುಹಿಸಿದಾಗ, ಶಾಲೆಗಳು ಯಾವುದೇ ಸಬೂಬು ನೀಡದೆ ಅವರಿಗೆ ಪ್ರವೇಶ ನೀಡಬೇಕು. ಈ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಲು ಶಾಲೆಗಳಿಗೆ ಹಕ್ಕಿಲ್ಲ ಎಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದ್ದಾರೆ.
“ಶಿಕ್ಷಣ ಎಂಬುದು ವ್ಯಾಪಾರವಲ್ಲ, ಅದು ಪ್ರತಿಯೊಬ್ಬ ಮಗುವಿನ ಹಕ್ಕು. ಬಡತನದ ಕಾರಣಕ್ಕೆ ಯಾವುದೇ ಮಗು ಗುಣಮಟ್ಟದ ಶಿಕ್ಷಣದಿಂದ ವಂಚಿತವಾಗಬಾರದು” ಎಂಬ ಆಶಯವನ್ನು ಪೀಠವು ವ್ಯಕ್ತಪಡಿಸಿದೆ.
ಈ ಆದೇಶವನ್ನು ಉಲ್ಲಂಘಿಸುವ ಶಾಲೆಗಳ ವಿರುದ್ಧ ಮಾನ್ಯತೆ ರದ್ದುಪಡಿಸುವಂತಹ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರಗಳಿಗೆ ನ್ಯಾಯಾಲಯ ಮುಕ್ತ ಅವಕಾಶ ನೀಡಿದೆ.








