ಚಿತ್ರದುರ್ಗ: ರಾಜ್ಯ ರಾಜಕೀಯದಲ್ಲಿ ಮುಂಬರುವ ಚುನಾವಣಾ ಕಣಗಳು ಈಗಿನಿಂದಲೇ ಕಾವೇರುತ್ತಿವೆ. ಇದಕ್ಕೆ ಪೂರಕವೆಂಬಂತೆ, ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ (By-election) ಅಧಿಕೃತ ಘೋಷಣೆಗೂ ಮುನ್ನವೇ ಅಲ್ಲಿ ರಾಜಕೀಯ ಫೈಟ್ ಜೋರಾಗಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಸೋಲಿನ ರುಚಿ ತೋರಿಸಲು ಜೆಡಿಎಸ್ ಭರ್ಜರಿ ತಂತ್ರಗಾರಿಕೆ ಹೆಣೆಯುತ್ತಿದ್ದು, ಆ ಬಗ್ಗೆ ಎಕ್ಸ್ಕ್ಲೂಸಿವ್ ಮಾಹಿತಿ ಮುಂದೆ ಓದಿ…
ಕಾಂಗ್ರೆಸ್ ಅಭ್ಯರ್ಥಿಗೆ ಹೆಚ್ಡಿಕೆ ಗಾಳ:
ಸಚಿವ ಡಿ.ಸುಧಾಕರ್ ಅವರು ಅಕಾಲಿಕ ನಿಧನದ ನಂತ್ರ ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆಯ ಹೊಸ್ತಿಲಿಗೆ ಬಂದು ನಿಂತಿದೆ. ಹಿರಿಯೂರು ಉಪಚುನಾವಣೆಯನ್ನು ಅತ್ಯಂತ ಪ್ರತಿಷ್ಠಿತವಾಗಿ ಪರಿಗಣಿಸಿರುವ ಜೆಡಿಎಸ್, ತೆರೆಮರೆಯಲ್ಲಿ ಗೆಲುವಿಗಾಗಿ ಭಾರಿ ಕಸರತ್ತು ನಡೆಸುತ್ತಿದೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರು ಈಗಾಗಲೇ ಒಂದೆರಡು ಸುತ್ತಿನ ಮಾತುಕತೆ ನಡೆಸಿದ್ದು, ಕಾಂಗ್ರೆಸ್ನ ಪ್ರಮುಖ ನಾಯಕರೊಬ್ಬರಿಗೆ ಜೆಡಿಎಸ್ ಗಾಳ ಹಾಕಿದೆ. ಕಾಂಗ್ರೆಸ್ನಲ್ಲಿ ಅಸಮಾಧಾನಗೊಂಡಿರುವ ತುಮಕೂರಿನ ಪ್ರಮುಖ ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ಅವರನ್ನು ಜೆಡಿಎಸ್ ಆಪರೇಷನ್ ಮಾಡಲು ಮುಂದಾಗಿದೆ.
ಸತೀಶ್ ಅಸಮಾಧಾನಕ್ಕೆ ಕಾರಣವೇನು?
ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಶಿರಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ನ ಪ್ರಬಲ ಆಕಾಂಕ್ಷಿಯಾಗಿದ್ದರು ಸಾಸಲು ಸತೀಶ್. ಆದರೆ ಕೊನೆ ಕ್ಷಣದಲ್ಲಿ ಹಿರಿಯ ನಾಯಕ ಟಿ.ಬಿ. ಜಯಚಂದ್ರ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿತ್ತು. ತದನಂತರ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗದೇ ಇರುವುದರಿಂದ ಸಾಸಲು ಸತೀಶ್ ತೀವ್ರ ಅಸಮಾಧಾನಗೊಂಡಿದ್ದಾರೆ. ಕಾಂಗ್ರೆಸ್ನ ಈ ಆಂತರಿಕ ಅಸಮಾಧಾನದ ಲಾಭ ಪಡೆಯಲು ದಳಪತಿಗಳು ಈಗ ದಾಳ ಉರುಳಿಸಿದ್ದಾರೆ. ಸತೀಶ್ ಅವರನ್ನು ಜೆಡಿಎಸ್ ಪಕ್ಷಕ್ಕೆ ಕರೆತಂದು, ಅವರನ್ನೇ ಹಿರಿಯೂರು ಉಪಚುನಾವಣೆಯ ಕಣಕ್ಕಿಳಿಸಲು ಜೆಡಿಎಸ್ ತಂತ್ರ ರೂಪಿಸಿದೆ.
ದಿವಂಗತ ಡಿ.ಸುಧಾಕರ್ ಅವರನ್ನೇ ಬೆಚ್ಚಿ ಬೀಳಿಸಿದ್ದ ಸಾಸಲು ಸತೀಶ್
ಈ ಹಿಂದೆ ಹಲವು ಸಾಮಾಜಿಕ ಕೆಲಸವನ್ನು ಮಾಡಿದ್ದಂತ ಸಾಸಲು ಸತೀಶ್ ಅವರು, ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಪರಿಚಯ ಮುಖ. ವೇಣುಕಲ್ಲು ಗುಡ್ಡದಲ್ಲಿ ಅಕಾಲಿಕವಾಗಿ ಕುರಿಗಳು ಸಾವನ್ನಪ್ಪಿದಂತ ಸಂದರ್ಭದಲ್ಲಿ ಸಾಸಲು ಸತೀಶ್ ಮಾಡಿದಂತ ಸಹಾಯವನ್ನು ಕ್ಷೇತ್ರದ ಜನರು ಮರೆತಿಲ್ಲ. ಅಂದು ಸಚಿವರಾಗಿದ್ದಂತ ಡಿ.ಸುಧಾಕರ್ ಅವರನ್ನೇ ಸಾಸಲು ಸತೀಶ್ ಮಾಡಿದಂತ ನೆರವು ಬೆಚ್ಚಿ ಬೀಳುವಂತೆ ಮಾಡಿತ್ತು. ಹೀಗಾಗಿ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಸಾಸಲು ಸತೀಶ್ ತನ್ನದೇ ಆದಂತ ಹಿಡಿತವನ್ನು ಹೊಂದಿದ್ದಾರೆ ಎನ್ನಲಾಗುತ್ತಿದೆ.
ಕುಂಚಿಟಿಗ ಮತ್ತು ಕಾಡುಗೊಲ್ಲ ಮತಗಳೇ ನಿರ್ಣಾಯಕ:
ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಬೇಕಾದರೆ ಆಯಾ ಸಮುದಾಯಗಳ ಮತಗಳೇ ನಿರ್ಣಾಯಕ ಪಾತ್ರ ವಹಿಸುತ್ತವೆ.
-
ಕ್ಷೇತ್ರದಲ್ಲಿ ಕುಂಚಿಟಿಗ ಮತ್ತು ಕಾಡುಗೊಲ್ಲ ಸಮುದಾಯದ ಮತಗಳು ದೊಡ್ಡ ಸಂಖ್ಯೆಯಲ್ಲಿದ್ದು, ಇವರೇ ಇಲ್ಲಿ ಕಿಂಗ್ ಮೇಕರ್ಸ್.
-
ಸಾಸಲು ಸತೀಶ್ ಅವರು ಕಾಡುಗೊಲ್ಲ ಸಮುದಾಯಕ್ಕೆ ಸೇರಿದ ಪ್ರಭಾವಿ ನಾಯಕರಾಗಿದ್ದಾರೆ.
-
ಹಿರಿಯೂರು ಕ್ಷೇತ್ರದಲ್ಲಿ ಸರಿಸುಮಾರು 40 ರಿಂದ 50 ಸಾವಿರ ಕಾಡುಗೊಲ್ಲ ಸಮುದಾಯದ ಮತಗಳಿದ್ದು, ಇವುಗಳನ್ನು ಸೆಳೆಯಲು ಸತೀಶ್ ಅವರ ಎಂಟ್ರಿ ಜೆಡಿಎಸ್ಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ ಎಂಬುದು ಹೆಚ್ಡಿಕೆ ಲೆಕ್ಕಾಚಾರವಾಗಿದೆ.
- ಈ ಹಿಂದೆ ಶಿರಾ ಉಪಚುನಾವಣೆಯಲ್ಲಿ ಕಾಡುಗೊಲ್ಲ ಸಮುದಾಯದ ಮತಗಳೇ ನಿರ್ಣಾಯಕವಾಗಿದ್ದವು. ಅದೇ ರೀತಿ ಹಿರಿಯೂರು ಉಪಚುನಾವಣೆಯಲ್ಲಿ ಕೂಡ ಕಾಡುಗೊಲ್ಲ ಸಮುದಾಯದ ಮತಗಳು ನಿರ್ಣಾಯಕ ಪಾತ್ರ ವಹಿಸಲಿದೆ.
ಮೈತ್ರಿ ಪಕ್ಷಗಳ ಒಪ್ಪಂದ:
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳಾಗಿರುವುದರಿಂದ, ಈ ಹಿಂದೆ ಬಾಗಲಕೋಟೆ ಹಾಗೂ ದಾವಣಗೆರೆ ಉಪಚುನಾವಣೆಗಳಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡಿತ್ತು. ಅದೇ ಲೆಕ್ಕಾಚಾರದ ಆಧಾರದ ಮೇಲೆ, ಈ ಬಾರಿ ಹಿರಿಯೂರು ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಬೇಕೆಂಬ ಮಾತುಕತೆಗಳು ನಡೆದಿವೆ ಎನ್ನಲಾಗುತ್ತಿದೆ.
ಸದ್ಯಕ್ಕೆ ಕಾಂಗ್ರೆಸ್ನಿಂದ ಪೂರ್ಣಿಮಾ ಶ್ರೀನಿವಾಸ್ ಸೇರಿದಂತೆ ಹಲವು ನಾಯಕರ ಹೆಸರುಗಳು ಕೇಳಿಬರುತ್ತಿದ್ದು, ಜೆಡಿಎಸ್ನ ಈ “ಆಪರೇಷನ್ ಸಾಸಲು ಸತೀಶ್” ತಂತ್ರಗಾರಿಕೆ ವರ್ಕೌಟ್ ಆದಲ್ಲಿ ಕಾಂಗ್ರೆಸ್ಗೆ ಭಾರಿ ಹಿನ್ನಡೆಯಾಗುವುದಂತೂ ಗ್ಯಾರಂಟಿ ಎಂಬುದು ಕ್ಷೇತ್ರದ ಜನರ ಮಾತು. ಅದು ಏನಾಗಲಿದೆ ಎಂಬುದನ್ನು ಉಪ ಚುನಾವಣೆ ಘೋಷಣೆಯ ನಂತ್ರ ಕಾದು ನೋಡಬೇಕಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…
’66 ರೌಡಿಶೀಟರ್’ಗಳ ಮುಕ್ತಿ ವಿವಾದ: ಬೆಂಗಳೂರು ನಗರ ಪೊಲೀಸ್ ಕಮೀಷನರ್ ಹೇಳಿದ್ದೇನು ಗೊತ್ತಾ?
ಗೋಪಾಲಕೃಷ್ಣ ಬೇಳೂರು ಸಚಿವರಾದರೆ ಬಿಜೆಪಿಗೆ ನಡುಕ: ಹಾಲಪ್ಪ ವಿರುದ್ಧ ಚೇತನ್ ರಾಜ್ ಕಣ್ಣೂರು ವಾಗ್ದಾಳಿ








