ಬೆಳಗಾವಿ: ನಗರದ ಉದ್ಯಮಭಾಗ ಕೈಗಾರಿಕಾ ಪ್ರದೇಶದಲ್ಲಿ ಭಾರಿ ಪ್ರಮಾಣದ ಜೀವಂತ ಗುಂಡುಗಳು (ಲೈವ್ ಬುಲೆಟ್ಗಳು) ಪತ್ತೆಯಾಗಿದ್ದು, ಇಡೀ ನಗರದಲ್ಲಿ ಆತಂಕ ಮೂಡಿಸಿದೆ. ಕಸದ ರಾಶಿಯಲ್ಲಿ ಒಟ್ಟು 59 ಜೀವಂತ ಗುಂಡುಗಳು ಪತ್ತೆಯಾಗಿದ್ದು, ಸ್ಥಳೀಯರು ಹಾಗೂ ಪೊಲೀಸರು ಬೆಚ್ಚಿಬಿದ್ದಿದ್ದಾರೆ.
ಕಸ ವಿಂಗಡಣೆ ವೇಳೆ ಸಿಕ್ಕಿದ ಗನ್ ಬುಲೆಟ್ಸ್:
ನಗರದ ಉದ್ಯಮಭಾಗ ಕೈಗಾರಿಕಾ ಪ್ರದೇಶದಲ್ಲಿ ಪೌರಕಾರ್ಮಿಕರು ಎಂದಿನಂತೆ ಕಸ ಸಂಗ್ರಹಿಸಿ, ಅದನ್ನು ವಿಂಗಡಣೆ ಮಾಡುತ್ತಿದ್ದರು. ಈ ವೇಳೆ ಕಸದ ರಾಶಿಯೊಳಗೆ ಸಂಶಯಾಸ್ಪದ ವಸ್ತುಗಳು ಕಂಡುಬಂದಿವೆ. ಹತ್ತಿರ ಹೋಗಿ ಪರಿಶೀಲಿಸಿದಾಗ ಅವು ಬಂದೂಕಿನ ಜೀವಂತ ಗುಂಡುಗಳೆಂದು ತಿಳಿದುಬಂದಿದೆ. ತಕ್ಷಣವೇ ಪೌರಕಾರ್ಮಿಕರು ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರಿಂದ ತೀವ್ರ ತನಿಖೆ:
ವಿಷಯ ತಿಳಿಯುತ್ತಿದ್ದಂತೆಯೇ ಉದ್ಯಮಭಾಗ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ, ಕಸದ ರಾಶಿಯಲ್ಲಿದ್ದ 59 ಜೀವಂತ ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ. ಇಷ್ಟೊಂದು ಭಾರಿ ಪ್ರಮಾಣದ ಗುಂಡುಗಳು ಕಸದ ತೊಟ್ಟಿಗೆ ಹೇಗೆ ಬಂದವು? ಇದನ್ನು ಇಲ್ಲಿ ತಂದು ಎಸೆದವರು ಯಾರು? ಎಂಬಿತ್ಯಾದಿ ಪ್ರಶ್ನೆಗಳು ಪೊಲೀಸರನ್ನು ಕಾಡುತ್ತಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.
ಈ ಸಂಬಂಧ ಉದ್ಯಮಭಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಜಾಲಾಡುತ್ತಿದ್ದಾರೆ. ಹಿನ್ನೆಲೆ ಏನೆಂಬುದನ್ನು ಪತ್ತೆ ಹಚ್ಚಲು ತನಿಖೆ ಮುಂದುವರಿದಿದೆ.
ಶ್ರೀಗಳ ಹೇಳಿಕೆ ಪ್ರಶ್ನಿಸಲು ಅನಂತಪುರದ ಬಿಜೆಪಿ ಮುಖಂಡನಿಗೆ ನೈತಿಕತೆ ಎಲ್ಲಿದೆ?: ಸೋಮಶೇಖರ್ ಲಾವಿಗೇರ ಪ್ರಶ್ನೆ








