ಶಿವಮೊಗ್ಗ: ಇತ್ತೀಚೆಗೆ ಸಾಗರದಲ್ಲಿ ನಡೆದ ಸಮುದಾಯದ ಸಭೆಯೊಂದರಲ್ಲಿ ಭಾಗವಹಿಸಿದ್ದ ಶ್ರೀಗಳು, ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಹಿರಿತನ ಹಾಗೂ ಸಮಾಜಕ್ಕೆ ಅವರು ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಸಚಿವರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದ್ದರು. ಆದರೆ ಅನಂತಪುರ ಭಾಗದ ಬಿಜೆಪಿ ಮುಖಂಡರೊಬ್ಬರು ಶ್ರೀಗಳ ಈ ಹೇಳಿಕೆಯನ್ನು ವಿರೋಧಿಸಿ, ಬೇಳೂರು ಅವರ ಹೆಸರನ್ನು ಪ್ರಸ್ತಾಪಿಸಿದ್ದೇ ತಪ್ಪು ಎನ್ನುವ ರೀತಿಯಲ್ಲಿ ಮಾತನಾಡಿರುವುದು ಖಂಡನೀಯ ಎಂದು ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಸೋಮಶೇಖರ್ ಲಾವಿಗೇರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮುಖಂಡನ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
”ಪ್ರಶ್ನಿಸುವ ನೈತಿಕತೆ ನಿನಗೆ ಎಲ್ಲಿದೆ?”
”ನಮ್ಮ ಜನಾಂಗದ ನಾಯಕರ ಬಗ್ಗೆ ಶ್ರೀಗಳು ಮಾತನಾಡಿದಾಗ, ಅದನ್ನು ಪ್ರಶ್ನಿಸುವ ನೈತಿಕತೆ ನಿನಗೆ ಎಲ್ಲಿದೆ? ಗೋಪಾಲಕೃಷ್ಣ ಬೇಳೂರು ಅವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾದವರು ಮತ್ತು ನಮ್ಮ ಜಿಲ್ಲೆಯಲ್ಲೇ ಅತ್ಯಂತ ಹಿರಿಯ ಶಾಸಕರಾಗಿದ್ದಾರೆ. ಅವರ ಹಿರಿತನವನ್ನು ಗೌರವಿಸಿ ಸಚಿವ ಸ್ಥಾನ ನೀಡುವಂತೆ ಶ್ರೀಗಳು ಮತ್ತು ಜನಾಂಗದವರು ಹಕ್ಕೊತ್ತಾಯ ಮಾಡಿದ್ದಾರೆ. ನಮ್ಮ ಜನಾಂಗದಲ್ಲಿ ಮಧು ಬಂಗಾರಪ್ಪ ಅವರು ಈಗಾಗಲೇ ಸಚಿವರಾಗಿದ್ದಾರೆ, ಭೀಮಣ್ಣ ನಾಯ್ಕ್ ಅವರು ಮೊದಲ ಬಾರಿಗೆ ಗೆದ್ದಿದ್ದಾರೆ. ಅವರಾರೂ ಸಚಿವರಾಗಬಾರದು ಎಂದು ಶ್ರೀಗಳು ಎಲ್ಲೂ ಹೇಳಿಲ್ಲ. ಹಿರಿಯರಿಗೆ ಆದ್ಯತೆ ನೀಡಿ ಎಂದು ಕೇಳಿರುವುದರಲ್ಲಿ ತಪ್ಪೇನಿದೆ?” ಎಂದು ಲಾವಿಗೇರ ಪ್ರಶ್ನಿಸಿದರು.
ವೈಫಲ್ಯಗಳ ವಿರುದ್ಧ ರಾಜಕಾರಣ ಮಾಡಲಿ
ರಾಜಕಾರಣ ಮಾಡುವುದಾದರೆ ಆಡಳಿತದಲ್ಲಿರುವವರ ವೈಫಲ್ಯಗಳನ್ನು ಎತ್ತಿ ತೋರಿಸಿ ಅಥವಾ ತಾಲೂಕಿನ ಜನತೆಗೆ ಆಗಬೇಕಾದ ಕೆಲಸಗಳ ಬಗ್ಗೆ ಮಾತನಾಡಿ ರಾಜಕೀಯ ಮಾಡಲಿ. ಅದನ್ನು ಬಿಟ್ಟು, ಪ್ರತೀ ಬಾರಿಯೂ ಮಾಧ್ಯಮಗಳ ಮುಂದೆ ಬಂದು ಗೋಪಾಲಕೃಷ್ಣ ಬೇಳೂರು ಅವರ ವಿರುದ್ಧ ಹೊಟ್ಟೆಕಿಚ್ಚು ಹಾಗೂ ದ್ವೇಷದ ರಾಜಕಾರಣ ಮಾಡುವುದು ಒಬ್ಬ ಸನ್ನಡೆತೆಯ ರಾಜಕಾರಣಿಗೆ ಶೋಭೆ ತರುವುದಿಲ್ಲ ಎಂದು ಅವರು ಬುದ್ಧಿವಾದ ಹೇಳಿದರು.
ವಾರಕ್ಕೆ ಎರಡು ಬಾರಿ ಪತ್ರಿಕಾಗೋಷ್ಠಿ ನಡೆಸಿ ಮಾಧ್ಯಮಗಳ ಮುಂದೆ ಮಾತನಾಡಿದ ತಕ್ಷಣ ತಾನೊಬ್ಬ ದೊಡ್ಡ ರಾಜಕಾರಣಿಯಾಗುತ್ತೇನೆ ಎಂಬ ಭ್ರಮೆಯಲ್ಲಿ ಆ ಬಿಜೆಪಿ ಮುಖಂಡನಿದ್ದಾನೆ ಎಂದು ಅವರು ಲೇವಡಿ ಮಾಡಿದರು.
ಜನಾಂಗಕ್ಕೆ ಈತನ ಕೊಡುಗೆ ಶೂನ್ಯ
”ಈ ಮುಖಂಡನಿಂದ ನಮ್ಮ ಜನಾಂಗಕ್ಕೆ ಯಾವುದೇ ಒಂದು ಎಳ್ಳಷ್ಟೂ ಉಪಕಾರವಾಗಿಲ್ಲ. ಈತ ಕೇವಲ ಚುನಾವಣಾ ಸಂದರ್ಭದಲ್ಲಿ ಕ್ರಿಕೆಟ್, ಕಬಡ್ಡಿ ಪಂದ್ಯಾವಳಿಗಳನ್ನು ನಡೆಸಿ ರಾಜಕೀಯ ಮಾಡಲು ಹೊರಡುವವನು. ಇತ್ತೀಚೆಗೆ ನಮ್ಮ ಸಮುದಾಯ ಭವನ ನಿರ್ಮಾಣದ ಸಂದರ್ಭದಲ್ಲಿ ತಾನೇ ಮುಂದೆ ಬಂದು, ಅಕೌಂಟ್ ನಂಬರ್ ಕೊಡಿ, ದುಡ್ಡು ಹಾಕುತ್ತೇನೆ, ಕೆಲಸ ಶುರು ಮಾಡಿ ಎಂದು ಹೇಳಿ ಹೋಗಿದ್ದ ಈತ, ಮನೆಗೆ ಹೋದ ತಕ್ಷಣ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಇಂತಹ ಯೋಗ್ಯತೆ ಇರುವ ಈತ ನಮ್ಮ ಜನಾಂಗದ ಮರ್ಯಾದೆ ತೆಗೆಯುತ್ತಿದ್ದಾನೆಯೇ ಹೊರತು ಬೇರೇನೂ ಅಲ್ಲ” ಎಂದು ಲಾವಿಗೇರ ಕಿಡಿಕಾರಿದರು.
ಬೇಳೂರು ಎಲ್ಲ ಜನಾಂಗದ ನಾಯಕರು
ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಕೇವಲ ಈಡಿಗ ಜನಾಂಗವೊಂದಕ್ಕೇ ಸೀಮಿತವಾದ ನಾಯಕರಲ್ಲ. ಅವರು ಎಲ್ಲ ಜನಾಂಗವನ್ನು ಸಮಾನವಾಗಿ ಕಾಣುವ ಮತ್ತು ಜೊತೆಯಲ್ಲಿ ಕೊಂಡೊಯ್ಯುವ ಸರ್ವ ಜನಾಂಗದ ನಾಯಕರಾಗಿದ್ದಾರೆ. ಅವರ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕು ಈ ಬಿಜೆಪಿ ಮುಖಂಡನಿಗಿಲ್ಲ. ಮುಂದಿನ ದಿನಗಳಲ್ಲಿ ತನ್ನ ನಾಲಿಗೆಯನ್ನು ಬಿಗಿಹಿಡಿದು ಮಾತನಾಡಬೇಕು ಎಂದು ಸೋಮಶೇಖರ್ ಲಾವಿಗೇರ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಪ್ರಮುಖರು:
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷರಾದ ಚೇತನ್ ರಾಜ್ ಕಣ್ಣೂರ್, ಸಾಗರ ನಗರಸಭೆ ಮಾಜಿ ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಕೌತಿ ಮಹಾಬಲೇಶ್, ನಾರಾಯಣಪ್ಪ ಸೂರನಗದ್ದೆ, ಅನಂತಪುರ ಭಾಗದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಉಮೇಶ್, ಕಾಂಗ್ರೆಸ್ ಮುಖಂಡರಾದ ಗಿರೀಶ್ ಕೋವಿ ಉಪಸ್ಥಿತರಿದ್ದರು.








