ಬೆಂಗಳೂರು: ಶಿವಮೊಗ್ಗದಲ್ಲಿ ನಡೆದಿದ್ದಂತ ಬಜರಂಗ ದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ( Harsha Murder Case ) ಸಂಬಂಧ, ಇಂದು ನ್ಯಾಯಾಲಯವು 9ನೇ ಆರೋಪಿಗೆ ಜಾಮೀನು ಮಂಜೂರು ಮಾಡಿದೆ.
ಇಂದು ಈ ಸಂಬಂಧ 9ನೇ ಆರೋಪಿ ಸೈಯದ್ ನದೀಮ್ ಎನ್ಐಎ ವಿಶೇಷ ಕೋರ್ಟ್ ಗೆ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಿ.ಎಂ ಗಂಗಾಧರ ನಡೆಸಿದರು. ಈ ವೇಳೆ ಕೋರ್ಟ್ ಗೆ ಆರೋಪಿ ಪರ ವಕೀಲರು ಸೈಯದ್ ನದೀಮ್ ಹರ್ಷ ಕೊಲೆ ಪ್ರಕರಣದಲ್ಲಿ ಎಲ್ಲಿಯೂ ನೇರವಾಗಿ ಭಾಗಿಯಾಗಿಲ್ಲ. ಆರೋಪಿಗೆ ಆಶ್ರಯ ನೀಡಿದ ಆರೋಪದಲ್ಲಿ ಬಂಧಿಸಿದ್ದಾರೆ ಎಂದು ಮನವರಿಕೆ ಮಾಡಿಕೊಟ್ಟರು.
ಈ ಮನವಿಯನ್ನು ಪುರಸ್ಕರಿಸಿದಂತ ಬೆಂಗಳೂರಿನ ಎನ್ಐಎ ವಿಶೇಷ ಕೋರ್ಟ್ ನ್ಯಾಯಾಧೀಶರು ಆರೋಪಿ ಸೈಯದ್ ನದೀಮ್ ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಅಂದಹಾಗೆ ಶಿವಮೊಗ್ಗದಲ್ಲಿ ಬಜರಂಗ ದಳದ ಕಾರ್ಯಕರ್ತ ಹರ್ಷನನ್ನು ಫೆಬ್ರವರಿ 20, 2022ರಂದು ರಾತ್ರಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆಗೈಯಲಾಗಿತ್ತು. ಈ ಪ್ರಕರಣದಲ್ಲಿ 10 ಮಂದಿ ಆರೋಪಿಗಳನ್ನು ಬಂಧಿಸಿದ್ದರು.