ಇಸ್ರೇಲ್‌ನ ಮೇಲಿನ ಅಕ್ಟೋಬರ್ 7 ರ ದಾಳಿಗಳ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮತ್ತು ಮೊಹಮ್ಮದ್ ಸಿನ್ವರ್ ನಂತರ ಹಮಾಸ್‌ನ ಮಿಲಿಟರಿ ವಿಭಾಗದ ಮುಖ್ಯಸ್ಥನಾಗಿ ಅಧಿಕಾರ ವಹಿಸಿಕೊಂಡಿದ್ದ ದೀರ್ಘಕಾಲದ ಹಮಾಸ್ ಕಮಾಂಡರ್ ಇಜ್ ಅಲ್-ದಿನ್ ಅಲ್-ಹದ್ದಾದ್‌ನನ್ನು ಶುಕ್ರವಾರ ನಡೆಸಿದ ನಿಖರ ದಾಳಿಯಲ್ಲಿ (ಪ್ರೆಸಿಷನ್ ಸ್ಟ್ರೈಕ್) ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಇಜ್ ಅಲ್-ದಿನ್ ಅಲ್-ಹದ್ದಾದ್ ಹಮಾಸ್‌ನ ಮಿಲಿಟರಿ ವಿಭಾಗದ ಮುಖ್ಯಸ್ಥನಾಗಿದ್ದ ಎಂದು ಇಸ್ರೇಲ್ ರಕ್ಷಣಾ ಪಡೆ (IDF) ತನ್ನ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ತಿಳಿಸಿದೆ.
ಗಾಜಾ ಯುದ್ಧದ ಸಮಯದಲ್ಲಿ “ಹಮಾಸ್ ವಶದಲ್ಲಿದ್ದ ಅನೇಕ ಇಸ್ರೇಲಿ ಒತ್ತೆಯಾಳುಗಳನ್ನು ಕೂಡಿಡುವಲ್ಲಿ ಅಲ್-ಹದ್ದಾದ್ ಭಾಗಿಯಾಗಿದ್ದ” ಎಂದು ಐಡಿಎಫ್ ಹೇಳಿದೆ.
”ಯುದ್ಧದ ಉದ್ದಕ್ಕೂ, ಹದ್ದಾದ್ ಹಮಾಸ್‌ನ ವಶದಲ್ಲಿದ್ದ ಅನೇಕ ಇಸ್ರೇಲಿ ಒತ್ತೆಯಾಳುಗಳನ್ನು ಕೂಡಿಡುವ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದನು. ಹದ್ದಾದ್ ಹಮಾಸ್‌ನ ಒತ್ತೆಯಾಳುಗಳ ಬಂಧನ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದನು ಮತ್ತು ತನ್ನ ಮೇಲಿನ ದಾಳಿಯನ್ನು (ಹತ್ಯೆಯನ್ನು) ತಡೆಯುವ ಪ್ರಯತ್ನವಾಗಿ ತನ್ನ ಸುತ್ತಲೂ ಒತ್ತೆಯಾಳುಗಳನ್ನು ಇರಿಸಿಕೊಂಡಿದ್ದನು,” ಎಂದು ಐಡಿಎಫ್ ಸೇರಿಸಿದೆ.
ಹಮಾಸ್ ಸ್ಥಾಪನೆಯಾದ ಕೆಲವೇ ದಿನಗಳಲ್ಲಿ ಹದ್ದಾದ್ ಸಂಘಟನೆಯನ್ನು ಸೇರಿಕೊಂಡಿದ್ದನು ಮತ್ತು “ಹಮಾಸ್‌ನ ಮಿಲಿಟರಿ ವಿಭಾಗದ ಸಾಮರ್ಥ್ಯಗಳನ್ನು ಪುನಶ್ಚೇತನಗೊಳಿಸಲು” ಕೆಲಸ ಮಾಡುತ್ತಿದ್ದನು ಎಂದು ಇಸ್ರೇಲಿ ಸೇನೆ ತಿಳಿಸಿದೆ.
”ಇದು ಒಂದು ಪ್ರಮುಖ ವೃತ್ತದ ಪೂರ್ಣಾವತಿಯಾಗಿದೆ (closing of a circle). ಸುರಕ್ಷಿತವಾಗಿ ಮರಳಿದ ಅಪಹೃತ ಒತ್ತೆಯಾಳುಗಳೊಂದಿಗೆ ನಾನು ನಡೆಸಿದ ಎಲ್ಲಾ ಸಂಭಾಷಣೆಗಳಲ್ಲಿ, ಈ ಮಹಾ ಹಂತಕ ಇಜ್ ಅಲ್-ದಿನ್ ಹದ್ದಾದ್‌ನ ಹೆಸರು ಪದೇ ಪದೇ ಪ್ರಸ್ತಾಪವಾಗಿತ್ತು,” ಎಂದು ಐಡಿಎಫ್‌ನ ಚೀಫ್ ಆಫ್ ಸ್ಟಾಫ್ ಲೆಫ್ಟಿನೆಂಟ್ ಜನರಲ್ ಇಯಾಲ್ ಜಮೀರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗಾಜಾ ಸಿಟಿಯಲ್ಲಿ ನಡೆಸಿದ “ನಿಖರವಾದ ದಾಳಿ”ಯಲ್ಲಿ ಹದ್ದಾದ್ ಕೊಲ್ಲಲ್ಪಟ್ಟಿದ್ದಾನೆ ಎಂದು ಇಸ್ರೇಲಿ ಸೇನೆ ಹೇಳಿದೆ. ಶನಿವಾರ ಗಾಜಾ ಸಿಟಿಯಲ್ಲಿ ಆತನ ಅಂತ್ಯಸಂಸ್ಕಾರ ನಡೆದಿದೆ.
ಶುಕ್ರವಾರ ಗಾಜಾ ಸಿಟಿಯಲ್ಲಿ ಎರಡು ಇಸ್ರೇಲಿ ದಾಳಿಗಳು ವರದಿಯಾಗಿದ್ದವು. ಒಂದು ದಾಳಿಯು ಕಟ್ಟಡವೊಂದನ್ನು ಗುರಿಯಾಗಿಸಿಕೊಂಡಿದ್ದರೆ, ಮತ್ತೊಂದು ವಾಹನವನ್ನು ಗುರಿಯಾಗಿಸಿಕೊಂಡಿತ್ತು. ಪ್ಯಾಲೆಸ್ತೀನ್ ರೆಡ್ ಕ್ರೆಸೆಂಟ್ ಸೊಸೈಟಿಯ ಸರಾಯಾ ಫೀಲ್ಡ್ ಆಸ್ಪತ್ರೆ ಮತ್ತು ಶಿಫಾ ಆಸ್ಪತ್ರೆಯ ಆರೋಗ್ಯ ಅಧಿಕಾರಿಗಳು ಈ ದಾಳಿಯಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು ಡಜನ್ಗಟ್ಟಲೆ ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಮೊಹಮ್ಮದ್ ಸಿನ್ವರ್ ಹತ್ಯೆಯ ನಂತರ ಹಮಾಸ್ ಮಿಲಿಟರಿ ಮುಖ್ಯಸ್ಥನಾಗಿ ಜವಾಬ್ದಾರಿ ವಹಿಸಿಕೊಂಡಿದ್ದ ಹದ್ದಾದ್
ಮೇ 2025 ರಲ್ಲಿ ಮೊಹಮ್ಮದ್ ಸಿನ್ವರ್ ಕೊಲ್ಲಲ್ಪಟ್ಟ ನಂತರ, ಹದ್ದಾದ್ ಗಾಜಾದಲ್ಲಿ ಹಮಾಸ್‌ನ ಮಿಲಿಟರಿ ಮುಖ್ಯಸ್ಥ ಮತ್ತು ನಾಯಕನಾಗಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದನು.
ಭಯೋತ್ಪಾದಕ ಸಂಘಟನೆಯ ಮಿಲಿಟರಿ ವಿಭಾಗದ ಸಾಮರ್ಥ್ಯಗಳನ್ನು ಪುನರ್ನಿರ್ಮಿಸಲು ಮತ್ತು ಇಸ್ರೇಲಿ ನಾಗರಿಕರು ಹಾಗೂ ಐಡಿಎಫ್ ಪಡೆಗಳ ವಿರುದ್ಧ ಹಲವಾರು ಭಯೋತ್ಪಾದಕ ದಾಳಿಗಳನ್ನು ಯೋಜಿಸಲು ಹದ್ದಾದ್ ಕೆಲಸ ಮಾಡುತ್ತಿದ್ದನು ಎಂದು ಐಡಿಎಫ್ ಹೇಳಿದೆ.
ಆತ ಹಮಾಸ್‌ನಲ್ಲಿ ಅತ್ಯಂತ ದೀರ್ಘಕಾಲ ಸೇವೆ ಸಲ್ಲಿಸಿದ ಕಮಾಂಡರ್‌ಗಳಲ್ಲಿ ಒಬ್ಬನಾಗಿದ್ದನು ಮತ್ತು ಗಾಜಾ ಪಟ್ಟಿಯ ಮೇಲಿನ ಹಮಾಸ್‌ನ ಭಯೋತ್ಪಾದಕ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿದ್ದನು.
ಅಕ್ಟೋಬರ್ 7 ರ ಹತ್ಯಾಕಾಂಡದ ಯೋಜನೆ, ಅನುಷ್ಠಾನ ಮತ್ತು ಐಡಿಎಫ್ ಪಡೆಗಳ ವಿರುದ್ಧದ ಯುದ್ಧ ಕಾರ್ಯಾಚರಣೆಗಳ ನಿರ್ವಹಣೆಯನ್ನು ಮುನ್ನಡೆಸಿದ್ದ ಕೊನೆಯ ಹಿರಿಯ ಕಮಾಂಡರ್‌ಗಳಲ್ಲಿ ಹದ್ದಾದ್ ಕೂಡ ಒಬ್ಬನಾಗಿದ್ದನು ಎಂದು ಐಡಿಎಫ್ ಸೇರಿಸಿದೆ.
’ದಿ ಘೋಸ್ಟ್’ (ದಿವ್ವ) ಎಂಬ ಅಡ್ಡಹೆಸರಿನಿಂದ ಕರೆಯಲ್ಪಡುತ್ತಿದ್ದ ಹದ್ದಾದ್, ಈ ಹಿಂದೆ ತನ್ನ ಮೇಲಿನ ಹಲವು ಹತ್ಯೆಯ ಯತ್ನಗಳಿಂದ ಬದುಕುಳಿದಿದ್ದನು.








