ಬೆಂಗಳೂರು: ರಾಜ್ಯದಲ್ಲಿ ಅಕಾಲಿಕ ಮಳೆ ಮತ್ತು ಗಾಳಿಯ ಆರ್ಭಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಶಿಥಿಲಗೊಂಡ ಹಳೆಯ ಕಟ್ಟಡಗಳ ಸುರಕ್ಷತೆಯ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯವು ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಅಧಿಕಾರಿಗಳಿಗೆ ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ.
ತಪಾಸಣೆ ಮತ್ತು ರೋಗಿಗಳ ಸ್ಥಳಾಂತರ
ರಾಜ್ಯದ ಎಲ್ಲಾ ಉಪ ಕೇಂದ್ರಗಳು (Sub Centre), ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHC), ಸಮುದಾಯ ಆರೋಗ್ಯ ಕೇಂದ್ರಗಳು (CHC), ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡಿ ಜಂಟಿ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಂದು ವೇಳೆ ಯಾವುದೇ ವಾರ್ಡ್ ಅಥವಾ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದರೆ, ಅಲ್ಲಿರುವ ರೋಗಿಗಳನ್ನು ತಕ್ಷಣವೇ ಸುರಕ್ಷಿತವಾದ ಮತ್ತೊಂದು ಕಟ್ಟಡಕ್ಕೆ ಸ್ಥಳಾಂತರಿಸಲು ಆದೇಶಿಸಲಾಗಿದೆ.
ದುರಸ್ತಿ ಮತ್ತು ಕಟ್ಟಡ ತೆರವು ಕಾರ್ಯ
ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಬಗ್ಗೆ ಇಂಜಿನಿಯರಿಂಗ್ ವಿಭಾಗದ ಮೂಲಕ ಪರಿಶೀಲನೆ ನಡೆಸಿ, ಅಗತ್ಯವಿರುವಲ್ಲಿ ತಕ್ಷಣವೇ ದುರಸ್ತಿ ಕಾಮಗಾರಿ ಕೈಗೊಳ್ಳಲು ಸೂಚಿಸಲಾಗಿದೆ. ಪೂರ್ಣ ಪ್ರಮಾಣದಲ್ಲಿ ಶಿಥಿಲಗೊಂಡು, ಪ್ರಸ್ತುತ ಬಳಕೆಯಲ್ಲಿಲ್ಲದ (Unoccupied) ಕಟ್ಟಡಗಳನ್ನು ನಿಯಮಾನುಸಾರ ನೆಲಸಮ (Demolish) ಮಾಡಲು ಕ್ರಮ ವಹಿಸುವಂತೆ ಇಲಾಖೆ ತಿಳಿಸಿದೆ. ಇದರೊಂದಿಗೆ ಆಸ್ಪತ್ರೆಗಳಲ್ಲಿನ ವಿದ್ಯುತ್ ಸಂಪರ್ಕದ ಸುರಕ್ಷತೆಯ ಬಗ್ಗೆಯೂ ಗಮನಹರಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
15 ದಿನಗಳ ಗಡುವು ಮತ್ತು ಅಧಿಕಾರಿಗಳ ಜವಾಬ್ದಾರಿ
ಜಿಲ್ಲಾ ನೋಡಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಜಿಲ್ಲೆಗಳಿಗೆ ಭೇಟಿ ನೀಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳೊಂದಿಗೆ (DHO) ಸಭೆ ನಡೆಸಬೇಕಿದೆ. ಕಟ್ಟಡಗಳ ಸ್ಥಿತಿಗತಿಯ ಕುರಿತು ಸಮಗ್ರ ವರದಿಯನ್ನು 15 ದಿನದೊಳಗೆ ಇಲಾಖೆಗೆ ಸಲ್ಲಿಸಲು ಗಡುವು ನೀಡಲಾಗಿದೆ. ಒಂದು ವೇಳೆ ಈ ಸೂಚನೆಯನ್ನು ಪಾಲಿಸದಿದ್ದಲ್ಲಿ ಅಥವಾ ಮುಂದೆ ಸಂಭವಿಸಬಹುದಾದ ಯಾವುದೇ ಅವಗಡಗಳಿಗೆ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಆಯುಕ್ತರು ಎಚ್ಚರಿಸಿದ್ದಾರೆ.
ಈ ಎಲ್ಲಾ ಮಾಹಿತಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡ ನಂತರ ನಿಗದಿತ ಇಮೇಲ್ ವಿಳಾಸಕ್ಕೆ ವರದಿ ಕಳುಹಿಸಲು ಜಿಲ್ಲಾ ಶಸ್ತ್ರ ಚಿಕಿತ್ಸಕರು ಮತ್ತು ಜಿಲ್ಲಾ ಆಕುಕ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಕರ್ತವ್ಯದ ಅವಧಿಯಲ್ಲೇ ಮಧ್ಯಪಾನ ಮಾಡಿದ ‘ಡಾಕ್ಟರ್’ಗೆ ಶಾಕ್: ಬಸವನ ಬಾಗೇವಾಡಿಯ ವಂದಲಾ PHC ವೈದ್ಯ ಸಸ್ಪೆಂಡ್
ಚರ್ನೋಬಿಲ್ ಕಣ್ಣೆದುರಿಗಿದೆ, ಕೈಗಾ ಹೋರಾಟದ ವಿಫಲತೆ ಬೇಸೂರಿನಲ್ಲಿ ಮರುಕಳಿಸದಿರಲಿ: ಎಚ್.ಬಿ.ರಾಘವೇಂದ್ರ








