ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ವಂದಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಡಾ.ರಾಜಶೇಖರ್ ಸಜ್ಜನ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾದ ಗುರುದತ್ತ ಹೆಗಡೆ ಅವರು ಆದೇಶ ಹೊರಡಿಸಿದ್ದಾರೆ.
ಗಂಭೀರ ಆರೋಪಗಳು ಮತ್ತು ದುರ್ನಡತೆ
ಡಾ. ರಾಜಶೇಖರ್ ಸಜ್ಜನ ಅವರ ವಿರುದ್ಧ ಗಂಭೀರ ಸ್ವರೂಪದ ಕರ್ತವ್ಯಲೋಪದ ದೂರುಗಳು ದಾಖಲಾಗಿವೆ. ಪ್ರಮುಖವಾಗಿ:
-
ವೈದ್ಯಾಧಿಕಾರಿಗಳು ನಿಗದಿತ ಸಮಯಕ್ಕೆ ಆಸ್ಪತ್ರೆಗೆ ಹಾಜರಾಗದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರಲಿಲ್ಲ.
-
ಕರ್ತವ್ಯದ ಅವಧಿಯಲ್ಲೇ ಮದ್ಯಪಾನ ಮಾಡಿ ಆರೋಗ್ಯ ಕೇಂದ್ರದಲ್ಲಿ ಮಲಗಿದ್ದಲ್ಲದೆ, ಮಲಗಿದ ಸ್ಥಳದಲ್ಲೇ ಮೂತ್ರ ವಿಸರ್ಜನೆ ಮಾಡಿರುವ ವಿಡಿಯೋ ಹಾಗೂ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
-
ಈ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ನೀಡಿದ್ದ ಕಾರಣ ಕೇಳುವ ನೋಟೀಸ್‌ಗೂ ವೈದ್ಯರು ಯಾವುದೇ ಉತ್ತರ ನೀಡದೆ ಉಡಾಫೆ ತೋರಿದ್ದರು.
ಸಚಿವರ ಭೇಟಿ ವೇಳೆ ಆಸ್ಪತ್ರೆಗೆ ಬೀಗ
ದಿನಾಂಕ 28-03-2026 ರಂದು ಸಚಿವರೂ ಆಗಿರುವ ಬಸವನ ಬಾಗೇವಾಡಿ ಶಾಸಕ ಶ್ರೀ ಶಿವಾನಂದ ಎಸ್. ಪಾಟೀಲ ಅವರು ವಂದಾಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆಗೆ ಬೀಗ ಹಾಕಿರುವುದು ಕಂಡುಬಂದಿದೆ. ಈ ಬೇಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ತಕ್ಷಣವೇ ವೈದ್ಯಾಧಿಕಾರಿಗಳನ್ನು ಅಮಾನತುಗೊಳಿಸಲು ಸೂಚನೆ ನೀಡಿದ್ದರು.
ಅಮಾನತು ಆದೇಶದ ವಿವರ
ಆರೋಗ್ಯ ಇಲಾಖೆಯ ಆಯುಕ್ತರಾದ ಗುರುದತ್ತ ಹೆಗಡೆ ಅವರು ಕರ್ನಾಟಕ ನಾಗರಿಕ ಸೇವಾ ನಿಯಮಗಳ ಅನ್ವಯ ಡಾ. ರಾಜಶೇಖರ್ ಸಜ್ಜನ ಅವರನ್ನು ಇಲಾಖಾ ವಿಚಾರಣೆ ಬಾಕಿ ಇರಿಸಿ ಅಮಾನತುಗೊಳಿಸಿದ್ದಾರೆ. ಅಮಾನತ್ತಿನ ಅವಧಿಯಲ್ಲಿ ಜೀವನಾಂಶ ಭತ್ಯೆ ಪಡೆಯುವ ಸಲುವಾಗಿ ಇವರ ಲೀನ್ ಅನ್ನು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾಯಿಸಲಾಗಿದೆ. ಅಲ್ಲದೆ, ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಡಬಾರದೆಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಸಾಗರದ ಬೇಸೂರು ಅಣು ವಿದ್ಯುತ್ ಸ್ಥಾವರ ಯೋಜನೆ: ತಕ್ಷಣ ಕೈಬಿಡುವಂತೆ ರೈತ ಸಂಘದ ಉಪಾಧ್ಯಕ್ಷ ಶಿವಾನಂದ ಕುಗ್ವೆ ಆಗ್ರಹ
ಚರ್ನೋಬಿಲ್ ಕಣ್ಣೆದುರಿಗಿದೆ, ಕೈಗಾ ಹೋರಾಟದ ವಿಫಲತೆ ಬೇಸೂರಿನಲ್ಲಿ ಮರುಕಳಿಸದಿರಲಿ: ಎಚ್.ಬಿ.ರಾಘವೇಂದ್ರ








