ಶಿವಮೊಗ್ಗ: ಪಕ್ಷಿಧಾಮ ನಿರ್ಮಿಸಲು ಕಾಯ್ದಿರಿಸಿದ್ದ ಅರಣ್ಯ ಪ್ರದೇಶವನ್ನು ಧ್ವಂಸಗೊಳಿಸಿರುವ ಪ್ರಭಾವಿ ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು, ಬದುಕು ಕಟ್ಟಿಕೊಂಡಿರುವ ಬಡ ಮತ್ತು ಅತಿ ಸಣ್ಣ ರೈತರ ಬೇಲಿ ಕಿತ್ತು ದೌರ್ಜನ್ಯ ಎಸಗಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಬೇಕು ಎಂದು ಸಂಯುಕ್ತ ರೈತ ಸಂಘದ ಸಾಗರ ತಾಲೂಕು ಅಧ್ಯಕ್ಷ ಎಂ.ಬಿ. ಮಂಜಪ್ಪ ಹಿರೇನೆಲ್ಲೂರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಇಲಾಖೆಯ ಏಕಪಕ್ಷೀಯ ನಡೆ ಹಾಗೂ ದಬ್ಬಾಳಿಕೆಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.
ಯಾರದ್ದೋ ಮಾತು ಕೇಳಿ ಸಣ್ಣ ರೈತರ ಮೇಲೆ ದಬ್ಬಾಳಿಕೆ!
ಘಟನೆಯ ವಿವರ ನೀಡಿದ ಮಂಜಪ್ಪ, “ಸೈದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆ.ಜಿ.ಕೊಪ್ಪ-ತಡಗಳಲೆ ಗ್ರಾಮದ ಸರ್ವೇ ನಂ. 243ರಲ್ಲಿ ಒಟ್ಟು 600 ಎಕರೆ ಕಂದಾಯ ಭೂಮಿ ಇದೆ. ಇದರಲ್ಲಿ ಸುಮಾರು 35 ಎಕರೆ ಪ್ರದೇಶವನ್ನು ಈ ಹಿಂದೆ ಬಂಗಾರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಿಂದಲೂ ‘ಪಕ್ಷಿಧಾಮ’ ನಿರ್ಮಿಸಲೆಂದೇ ಕಾಯ್ದಿರಿಸಲಾಗಿತ್ತು. ಈ ಕಂದಾಯ ಭೂಮಿಯ ಅತ್ಯಲ್ಪ ಭಾಗದಲ್ಲಿ ಕೆ.ಜಿ.ಕೊಪ್ಪದ 30 ಹಾಗೂ ತಡಗಳಲೆ ಗ್ರಾಮದ 20 ಕುಟುಂಬಗಳು ಮುಕ್ಕಾಲು ಎಕರೆ, ಒಂದು ಎಕರೆಯಷ್ಟು ಜಾಗದಲ್ಲಿ ಬಗರ್‌ಹುಕುಂ ಅಡಿಯಲ್ಲಿ ಗಿಡಗಳನ್ನು ನೆಟ್ಟು ಸಾಗುವಳಿ ಮಾಡುತ್ತಾ ಜೀವನ ಸಾಗಿಸುತ್ತಿವೆ” ಎಂದರು.
ಆದರೆ, ಕಳೆದ ಮಂಗಳವಾರ ಅರಣ್ಯ ಇಲಾಖೆ ಅಧಿಕಾರಿಗಳು ಯಾರದ್ದೋ ಪ್ರಚೋದನೆಗೆ ಒಳಗಾಗಿ, ಏಕಾಏಕಿ ತಡಗಳಲೆ ಗ್ರಾಮದ ಸಣ್ಣ ರೈತರ ಜಮೀನಿಗೆ ನುಗ್ಗಿ ಅವರು ಹಾಕಿದ್ದ ಬೇಲಿಗಳನ್ನು ಕಿತ್ತುಹಾಕಿ, ಗಿಡಗಳನ್ನು ನಾಶಪಡಿಸುವ ಮೂಲಕ ದೌರ್ಜನ್ಯ ಎಸಗಿದ್ದಾರೆ. ತಾಲೂಕಿನಲ್ಲಿ ಹತ್ತಾರು ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಪ್ರಭಾವಿಗಳ ವಿರುದ್ಧ ಕ್ರಮ ಜರುಗಿಸಲು ಧೈರ್ಯವಿಲ್ಲದ ಅರಣ್ಯ ಇಲಾಖೆ, ಕೇವಲ ಬಡ ರೈತರನ್ನು ಗುರಿಯಾಗಿಸಿಕೊಂಡು ದಬ್ಬಾಳಿಕೆ ನಡೆಸುತ್ತಿದೆ ಎಂದು ಅವರು ದೂರಿದರು.
15 ದಿನಗಳ ಗಡುವು: ಶಿವಮೊಗ್ಗ CCF ಕಚೇರಿ ಎದುರು ಪ್ರತಿಭಟನೆ ಎಚ್ಚರಿಕೆ
ಬಡ ರೈತರ ಜಮೀನು ಹಾಗೂ ಬೇಲಿ ಧ್ವಂಸಗೊಳಿಸಿರುವ ಅರಣ್ಯ ಇಲಾಖೆಯ ಕೃತ್ಯವನ್ನು ಸಂಯುಕ್ತ ರೈತ ಸಂಘ ಉಗ್ರವಾಗಿ ಖಂಡಿಸುತ್ತದೆ. ಈ ಇಡೀ ದೌರ್ಜನ್ಯದ ಹಿಂದೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ (DCF) ಕೈವಾಡವಿದೆ ಎಂದು ಆರೋಪಿಸಿದ ಅವರು,
“ಬಡ ರೈತರ ಹೊಟ್ಟೆ ಮೇಲೆ ಹೊಡೆದಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ (RFO) ಹಾಗೂ ಅರಣ್ಯ ರಕ್ಷಕರ (Forest Guards) ವಿರುದ್ಧ ಮುಂದಿನ 15 ದಿನಗಳ ಒಳಗಾಗಿ ಸೂಕ್ತ ಶಿಸ್ತುಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರೈತ ಸಂಘದ ವತಿಯಿಂದ ಶಿವಮೊಗ್ಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ (CCF) ಕಚೇರಿ ಮುಂಭಾಗ ಬೃಹತ್ ಮತ್ತು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.” — ಎಂ.ಬಿ. ಮಂಜಪ್ಪ ಹಿರೇನೆಲ್ಲೂರು, ಅಧ್ಯಕ್ಷರು, ಸಂಯುಕ್ತ ರೈತ ಸಂಘ.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ರಾಮಪ್ಪ ಶಿರವಾಳ, ಚಂದ್ರು, ಕನ್ನಪ್ಪ, ದಿನೇಶ್, ವೀರಭದ್ರ, ರಾಜು, ಪರಶುರಾಮ, ರಾಚಪ್ಪ ಹಾಗೂ ಜಗದೀಶ್ ಉಪಸ್ಥಿತರಿದ್ದು ಇಲಾಖೆಯ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
JOB ALERT: ಗ್ರಾಮ ಪಂಚಾಯ್ತಿಯ ಅರಿವು ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ, ಜುಲೈ.8 ಲಾಸ್ಟ್ ಡೇಟ್
ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಹಾಕಲು ಬಿಜೆಪಿಯ SIR ಸಂಚು: ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಗಂಭೀರ ಆರೋಪ!








