ಬೆಂಗಳೂರು : ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಸರಣಿ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಕೋಟ್ಯಂತರ ರೂಪಾಯಿ ದರೋಡೆ ನಡೆದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿ, ಅವರ ಮೇಲೆ ಭೀಕರವಾಗಿ ಹಲ್ಲೆ ನಡೆಸಿ ಬರೋಬ್ಬರಿ 1.09 ಕೋಟಿ ರೂಪಾಯಿ ನಗದು ಹಣವನ್ನು ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ರಾಜಧಾನಿಯ ಯಲಹಂಕದ ಬಳಿ ಈ ಘಟನೆ ನಡೆದಿದೆ. ಸಂತ್ರಸ್ತ ಉದ್ಯಮಿಯನ್ನು ಶಿವಶಂಕರ್ ಎಂದು ಗುರುತಿಸಲಾಗಿದೆ. ಅವರು ಯಲಹಂಕದಿಂದ ಭಾರಿ ಪ್ರಮಾಣದ ನಗದು ಹಣವನ್ನು ಪಡೆದುಕೊಂಡು ತಮ್ಮ ಕಾರಿನಲ್ಲಿ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಸಂಚು ರೂಪಿಸಿದ್ದ ದರೋಡೆಕೋರರ ತಂಡ ಇವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.
ಮಧ್ಯರಾತ್ರಿ ನಡೆದ ಹಲ್ಲೆ, ದರೋಡೆ
ಕಳೆದ ಸೋಮವಾರ ರಾತ್ರಿ ಸುಮಾರು 11 ಗಂಟೆಯ ಸುಮಾರಿಗೆ ಈ ದರೋಡೆ ನಡೆದಿದೆ ಎನ್ನಲಾಗಿದೆ. ಜನನಿಲ್ಲದ ರಸ್ತೆಯಲ್ಲಿ ಉದ್ಯಮಿ ಶಿವಶಂಕರ್ ಅವರ ಕಾರನ್ನು ಸಿನಿಮೀಯ ಶೈಲಿಯಲ್ಲಿ ಅಡ್ಡಗಟ್ಟಿದ ಏಳು ಜನ ದುಷ್ಕರ್ಮಿಗಳ ಗ್ಯಾಂಗ್, ಏಕಾಏಕಿ ಶಿವಶಂಕರ್ ಅವರ ಮೇಲೆ ಮುಗಿಬಿದ್ದಿದೆ. ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ, ಗಾಯಗೊಳಿಸಿ, ಕಾರಿನಲ್ಲಿದ್ದ 1.09 ಕೋಟಿ ರೂಪಾಯಿ ಹಣದ ಬ್ಯಾಗ್ ಅನ್ನು ಕಸಿದುಕೊಂಡು ಕ್ಷಣಾರ್ಧದಲ್ಲಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಹಳೆಯ ಉದ್ಯಮದಲ್ಲಿ ನಷ್ಟದ ಇತಿಹಾಸ
ದರೋಡೆಗೊಳಗಾದ ಉದ್ಯಮಿ ಶಿವಶಂಕರ್ ಅವರಿಗೆ ಹಣ ಕಳೆದುಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಇವರು ಈ ಹಿಂದೆ ಆಂಟಿಕ್ ಪೀಸ್ (ಪುರಾತನ ವಸ್ತುಗಳ) ಮಾರಾಟ ಮಾಡುವ ವ್ಯವಹಾರವನ್ನು ಮಾಡಿಕೊಂಡಿದ್ದರು. ಮೂಲಗಳ ಪ್ರಕಾರ, ಆ ಹಳೆಯ ಬಿಸಿನೆಸ್‌ನಲ್ಲೂ ಸಹ ಶಿವಶಂಕರ್ ಅವರು ಈಗಾಗಲೇ ದೊಡ್ಡ ಮೊತ್ತದ ಹಣವನ್ನು ಕಳೆದುಕೊಂಡು ನಷ್ಟ ಅನುಭವಿಸಿದ್ದರು ಎನ್ನಲಾಗಿದೆ.
ಹೊಸ ಬ್ಯುಸಿನೆಸ್ ಆಸೆ ತಂದ ಆಪತ್ತು
ಹಳೇ ಉದ್ಯಮದಲ್ಲಿ ಕೈಸುಟ್ಟುಕೊಂಡಿದ್ದ ಶಿವಶಂಕರ್, ಆ ನಷ್ಟದಿಂದ ಹೊರಬರಲು ಹೊಸದೊಂದು ಬ್ಯುಸಿನೆಸ್ ಮಾಡಲು ಮುಂದಾಗಿದ್ದರು. ಇದಕ್ಕಾಗಿ ಅವರು ಆಂಧ್ರಪ್ರದೇಶ ಮೂಲದ ಮಹಮದ್ ಪರ್ವೇಜ್ ಹಾಗೂ ಹೈದರಾಬಾದ್‌ನ ಸಲೀಂ ಎಂಬುವವರ ಜೊತೆ ಕೈಜೋಡಿಸಿದ್ದರು. ಇವರೊಂದಿಗೆ ಹೊಸ ವ್ಯವಹಾರದ ಡೀಲ್ ಕುದುರಿಸಲು ಮತ್ತು ಬಂಡವಾಳ ಹೂಡಲು ಶಿವಶಂಕರ್ ಭಾರಿ ಪ್ರಮಾಣದ ಹಣವನ್ನು ಸಿದ್ಧಪಡಿಸಿಕೊಂಡಿದ್ದರು.
ಪೊಲೀಸರಿಂದ ತನಿಖೆ ಚುರುಕು
ಹೊಸ ಬ್ಯುಸಿನೆಸ್‌ಗಾಗಿ ಯಲಹಂಕದಿಂದ ಬರೋಬ್ಬರಿ 1.09 ಕೋಟಿ ರೂಪಾಯಿ ನಗದನ್ನು ಕಾರಿನಲ್ಲಿ ತೆಗೆದುಕೊಂಡು ಬರುತ್ತಿದ್ದಾಗ, ಕರಾರುವಾಕ್ಕಾಗಿ ಹೊಂಚು ಹಾಕಿದ್ದ ದುಷ್ಕರ್ಮಿಗಳು ದರೋಡೆ ಮಾಡಿದ್ದಾರೆ. ಇದು ಶಿವಶಂಕರ್ ಅವರ ಹಣದ ಚಲನವಲನದ ಬಗ್ಗೆ ಮಾಹಿತಿ ಇದ್ದವರೇ ನಡೆಸಿರುವ ಕೃತ್ಯವೇ ಅಥವಾ ಇದರ ಹಿಂದೆ ಪಾಲುದಾರರ ಕೈವಾಡವಿದೆಯೇ ಎಂಬ ಅನುಮಾನ ಮೂಡಿದೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.








