ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿರುವ ಬೆನ್ನಲ್ಲೇ ಮತ್ತೊಂದು ಮಹತ್ವದ ರಾಜತಾಂತ್ರಿಕ ಬೆಳವಣಿಗೆಯೊಂದು ಮುನ್ನೆಲೆಗೆ ಬಂದಿದೆ. ಇರಾನ್‌ನಲ್ಲಿ ಮಾನವೀಯ ಅಗತ್ಯಗಳಿಗಾಗಿ (Humanitarian Spending) ವೆಚ್ಚ ಮಾಡಲು, ಸದ್ಯ ಮುಟ್ಟುಗೋಲು ಹಾಕಿಕೊಳ್ಳಲಾಗಿರುವ (Unfreeze) ಇರಾನ್‌ನ ಹಣವನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಅಮೆರಿಕ ಸರ್ಕಾರವು ಕತಾರ್ ದೇಶದೊಂದಿಗೆ ಮಾತುಕತೆ ನಡೆಸಲು ಗಂಭೀರ ಆಲೋಚನೆ ನಡೆಸುತ್ತಿದೆ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ (WSJ) ವರದಿ ಮಾಡಿದೆ.
-
ಅಮೆರಿಕ ಮತ್ತು ಇರಾನ್ ನಡುವಿನ ಸಂಬಂಧ ತೀವ್ರವಾಗಿ ಹದಗೆಟ್ಟಿದ್ದರೂ, ಇರಾನ್‌ನ ಸಾಮಾನ್ಯ ಜನರಿಗೆ ಆಹಾರ, ಔಷಧ ಮತ್ತು ಇತರ ಅಗತ್ಯ ವಸ್ತುಗಳ ಪೂರೈಕೆಗೆ ತೊಂದರೆಯಾಗದಂತೆ ತಡೆಯಲು ಅಮೆರಿಕ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. ಇದಕ್ಕಾಗಿ ಮಧ್ಯಪ್ರಾಚ್ಯದ ಪ್ರಮುಖ ದೇಶವಾದ ಕತಾರ್ ಅನ್ನು ಬಳಸಿಕೊಳ್ಳಲು ವಾಷಿಂಗ್ಟನ್ ನಿರ್ಧರಿಸಿದೆ.
-
ಮುಟ್ಟುಗೋಲು ಮುಕ್ತಗೊಳಿಸಲಾಗುವ ಈ ಹಣವು ಕೇವಲ ಮಾನವೀಯ ಉದ್ದೇಶಗಳಿಗೆ ಮಾತ್ರ ಬಳಕೆಯಾಗಬೇಕು ಮತ್ತು ಇರಾನ್ ಸರ್ಕಾರವು ಇದನ್ನು ಯಾವುದೇ ಮಿಲಿಟರಿ ಅಥವಾ ಯುದ್ಧದ ಸಿದ್ಧತೆಗಳಿಗೆ ಬಳಸದಂತೆ ಕಠಿಣ ನಿಗಾವಹಿಸುವ ಜವಾಬ್ದಾರಿಯನ್ನು ಕತಾರ್‌ಗೆ ವಹಿಸುವ ಸಾಧ್ಯತೆಯಿದೆ.
-
ಇತ್ತೀಚೆಗಷ್ಟೇ ಅಮೆರಿಕ-ಇರಾನ್ ಶಾಂತಿ ಮಾತುಕತೆಗಳು ಮುಂದೂಡಲ್ಪಟ್ಟು, ಹಾರ್ಮುಜ್ ಜಲಸಂಧಿ ಬಂದ್ ಮಾಡುವ ಭೀತಿ ಎದುರಾಗಿರುವ ಬೆನ್ನಲ್ಲೇ ಈ ಸುದ್ದಿ ಹೊರಬಿದ್ದಿದೆ. ಈ ಮೂಲಕ ಇರಾನ್ ಮೇಲಿನ ಆರ್ಥಿಕ ಒತ್ತಡವನ್ನು ಸ್ವಲ್ಪ ಮಟ್ಟಿಗೆ ಸಡಿಲಗೊಳಿಸಿ, ಆ ದೇಶವನ್ನು ಮತ್ತೆ ಮಾತುಕತೆಯ ಮೇಜಿಗೆ ತರಲು ಅಮೆರಿಕ ಪ್ರಯತ್ನಿಸುತ್ತಿರಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಒಂದೆಡೆ ಜೆ.ಡಿ. ವ್ಯಾನ್ಸ್ ಮತ್ತು ಡೊನಾಲ್ಡ್ ಟ್ರಂಪ್ ಆಡಳಿತ ಇರಾನ್‌ಗೆ ಕಠಿಣ ಮಿಲಿಟರಿ ಎಚ್ಚರಿಕೆಗಳನ್ನು ನೀಡುತ್ತಿರುವ ಬೆನ್ನಲ್ಲೇ, ಮತ್ತೊಂದೆಡೆ ಇಂತಹದ್ದೊಂದು ರಾಜತಾಂತ್ರಿಕ ಆರ್ಥಿಕ ನಡೆ ಇಡುತ್ತಿರುವುದು ಜಾಗತಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.








