ಬೆಂಗಳೂರು: ರಾಜ್ಯದ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸ್ವಂತ ಮನೆ ನಿರ್ಮಿಸಿಕೊಂಡಿರುವ ಸಾರ್ವಜನಿಕರಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ನಿಗದಿತ ಮಿತಿಯೊಳಗಿನ ವಸತಿ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕವನ್ನು ಪಡೆಯಲು ಸ್ವಾಧೀನಾನುಭವ ಪ್ರಮಾಣ ಪತ್ರ (Occupancy Certificate – OC) ಪಡೆಯುವುದರಿಂದ ಒಂದು ಬಾರಿಗೆ ವಿನಾಯಿತಿ ನೀಡಿ ಸರ್ಕಾರ ಹೊಸ ಆದೇಶ ಹೊರಡಿಸಿದೆ.
ಸಾರ್ವಜನಿಕರಿಗೆ ಸುಲಭವಾಗಿ ಸೇವೆ ಒದಗಿಸುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಇಲಾಖೆಯು ಈ ಮಹತ್ವದ ತೀರ್ಮಾನ ಕೈಗೊಂಡಿದೆ.
ಯಾರಿಗೆ ಸಿಗಲಿದೆ ಈ ವಿನಾಯಿತಿ?
ಸರ್ಕಾರದ ಹೊಸ ಆದೇಶದನ್ವಯ ಈ ಕೆಳಗಿನ ನಿಯಮಗಳಿಗೆ ಒಳಪಡುವ ವಸತಿ ಕಟ್ಟಡಗಳಿಗೆ ಒಸಿ (OC) ಮುಕ್ತಾಯದಿಂದ ವಿನಾಯಿತಿ ಸಿಗಲಿದೆ:
ನಿವೇಶನದ ಅಳತೆ: 2400 ಚದರ ಅಡಿ ವಿಸ್ತೀರ್ಣದವರೆಗಿನ (+20% ಹೆಚ್ಚುವರಿ ವಿಸ್ತೀರ್ಣದ ಮಿತಿಯೊಂದಿಗೆ) ನಿವೇಶನಗಳು.
ಕಟ್ಟಡದ ಮಿತಿ: ನೆಲಮಹಡಿ + 3 ಅಂತಸ್ತುಗಳು (G + 3) ಅಥವಾ ಸ್ಟಿಲ್ಟ್ ಪಾರ್ಕಿಂಗ್ + 4 ಮಹಡಿಗಳನ್ನು (Stilt Parking + 4) ಹೊಂದಿರುವ ವಸತಿ ಕಟ್ಟಡಗಳು.
ಕೊನೆಯ ದಿನಾಂಕ: ಸದರಿ ಕಟ್ಟಡಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ವಿದ್ಯುತ್ ಸಂಪರ್ಕಕ್ಕಾಗಿ ದಿನಾಂಕ: 31.05.2026ರ ಒಳಗಾಗಿ ಅರ್ಜಿ ಸಲ್ಲಿಸಿರಬೇಕು.
ಸ್ಥಳ ತನಿಖೆ ಕಡ್ಡಾಯ
ವಿನಾಯಿತಿ ಸಿಕ್ಕ ತಕ್ಷಣವೇ ನೇರವಾಗಿ ಸಂಪರ್ಕ ಸಿಗುವುದಿಲ್ಲ. ಅರ್ಹ ಕಟ್ಟಡಗಳು ಪೂರ್ಣಗೊಂಡಿರುವುದನ್ನು ಖಚಿತಪಡಿಸಿಕೊಳ್ಳಲು ವಿದ್ಯುತ್ ಸರಬರಾಜು ಕಂಪನಿಗಳು (Escoms) ಸ್ಥಳ ತನಿಖೆ ನಡೆಸಲಿವೆ. ಸ್ಥಳದಲ್ಲಿ ಕಟ್ಟಡದ ಭಾವಚಿತ್ರವನ್ನು ತೆಗೆದು, ದಾಖಲೆಗಳನ್ನು ಪರಿಶೀಲಿಸಿದ ಬಳಿಕವಷ್ಟೇ ವಿದ್ಯುತ್ ಸಂಪರ್ಕ ನೀಡಲು ಸರ್ಕಾರ ಆದೇಶಿಸಿದೆ.
ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ
ಈ ಹಿಂದೆ 24.10.2025 ರಂದು ಹೊರಡಿಸಲಾಗಿದ್ದ ಆದೇಶದಲ್ಲಿ 1200 ಚ.ಅಡಿವರೆಗಿನ ನಿವೇಶನಗಳ (ನೆಲ + 2 ಅಥವಾ ಸ್ಟಿಲ್ಟ್ + 3 ಅಂತಸ್ತು) ಕಟ್ಟಡಗಳಿಗೆ ಮಾತ್ರ ಈ ವಿನಾಯಿತಿ ಇತ್ತು. ಆದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಈಗ ನಿಯಮಗಳನ್ನು ಸಡಿಲಗೊಳಿಸಲಾಗಿದ್ದು, ವಿಸ್ತೀರ್ಣವನ್ನು 2400 ಚ.ಅಡಿಗೆ ಹೆಚ್ಚಿಸಲಾಗಿದೆ. ದಿನಾಂಕ: 03.06.2026 ರಂದು ನಡೆದ ಸಚಿವ ಸಂಪುಟ ಸಭೆಯ (ಪ್ರಕರಣ ಸಂಖ್ಯೆ: ಸಿ:310/2026) ನಿರ್ಣಯದನ್ವಯ ಈ ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ನಾಗೇಶ್ ಕೆ. ಅವರು ತಿಳಿಸಿದ್ದಾರೆ.









