ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಲ್ ಕಲೆಕ್ಟರ್ (ಕರವಸೂಲಿಗಾರ) ಮತ್ತು ನೌಕರರಿಗೆ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯವು ಮಹತ್ವದ ನೆಮ್ಮದಿಯ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ಅತ್ಯಂತ ಅನಿವಾರ್ಯ ಅಥವಾ ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ, ಸಾಮಾನ್ಯ ಸರ್ಕಾರಿ ರಜೆ ದಿನಗಳಲ್ಲಿ ಬಿಲ್ ಕಲೆಕ್ಟರ್ ಗಳಿಗೆ ತೆರಿಗೆ ವಸೂಲಾತಿ ಅಭಿಯಾನದ ಹೆಸರಿನಲ್ಲಿ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶಿಸಬಾರದು ಎಂದು ಆಯುಕ್ತಾಲಯವು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ (CEO) ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ನೌಕರರ ಸಂಘದ ರಾಜ್ಯ ಅಧ್ಯಕ್ಷರು ಈ ಹಿಂದೆ ಸರ್ಕಾರಕ್ಕೆ ಮಹತ್ವದ ಮನವಿಯೊಂದನ್ನು ಸಲ್ಲಿಸಿದ್ದರು. ಗ್ರಾಮ ಪಂಚಾಯತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಿಲ್ ಕಲೆಕ್ಟರ್ಗಳಿಗೆ ಸರ್ಕಾರಿ ರಜೆ ದಿನಗಳಲ್ಲೂ ಸಹ ಕಡ್ಡಾಯವಾಗಿ ತೆರಿಗೆ ವಸೂಲಾತಿ ಅಭಿಯಾನ ನಿರ್ವಹಿಸಲು ಆದೇಶಿಸಲಾಗುತ್ತಿದ್ದು, ಇದನ್ನು ನಿಯಂತ್ರಿಸಬೇಕು ಹಾಗೂ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಸಂಘವು ವಿನಂತಿಸಿತ್ತು.
ಆಯುಕ್ತಾಲಯದ ಆದೇಶದಲ್ಲಿ ಏನಿದೆ?
ನೌಕರರ ಸಂಘದ ಈ ಮನವಿಯನ್ನು ಪರಿಶೀಲಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು (ಪಂ.ರಾಜ್) ಇದಕ್ಕೆ ಅನುಮೋದನೆ ನೀಡಿದ್ದಾರೆ. ಗ್ರಾಮ ಪಂಚಾಯತಿಗಳಲ್ಲಿ ಸಂಪನ್ಮೂಲದ ಸಂಗ್ರಹಣೆಯು ಆದ್ಯತೆಯ ವಿಷಯವಾಗಿದ್ದರೂ, ಆರ್ಥಿಕ ವರ್ಷದ ಪ್ರಾರಂಭದಿಂದಲೇ ತೆರಿಗೆ ಸಂಗ್ರಹಣೆಯ ವಿಷಯವನ್ನು ನಿಯಮಿತವಾಗಿ ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಹಂತಗಳಲ್ಲಿ ಸೂಕ್ತವಾಗಿ ಮೇಲ್ವಿಚಾರಣೆ ಮಾಡಬೇಕು. ಅದನ್ನು ಬಿಟ್ಟು ರಜೆ ದಿನಗಳಲ್ಲಿ ಕೆಲಸ ಮಾಡುವಂತೆ ಒತ್ತಡ ಹೇರಬಾರದು ಎಂದು ಸೂಚಿಸಲಾಗಿದೆ.
ಆದ್ದರಿಂದ, ಅತ್ಯಂತ ವಿಶೇಷ ಮತ್ತು ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ, ಸಾಮಾನ್ಯ ರಜೆ ದಿನಗಳಲ್ಲಿ ಕರ ವಸೂಲಿಗಾರರು ಕೆಲಸ ನಿರ್ವಹಿಸುವಂತೆ ಆದೇಶ ಮಾಡದಂತೆ ಸಂಬಂಧಪಟ್ಟ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತರು ಈ ಅಧಿಕೃತ ಪತ್ರದ ಮೂಲಕ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ಈ ಆದೇಶದಿಂದಾಗಿ ಸುದೀರ್ಘ ದಿನಗಳಿಂದ ರಜೆ ದಿನಗಳಲ್ಲೂ ವಿಶ್ರಮವಿಲ್ಲದೆ ಕೆಲಸ ಮಾಡುತ್ತಿದ್ದ ಗ್ರಾಮ ಪಂಚಾಯತ್ ನೌಕರರು ಹಾಗೂ ಬಿಲ್ ಕಲೆಕ್ಟರ್ಗಳು ನಿಟ್ಟುಸಿರು ಬಿಡುವಂತಾಗಿದೆ.








