ಬೆಂಗಳೂರು: ಶಿಕ್ಷಣ ಇಲಾಖೆಯಿಂದ ( Education Department ) ಮಕ್ಕಳಿಗೆ ಇನ್ಮುಂದೆ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ( mid day meal scheme ) ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಹಬ್ಬದಂದು ಹಬ್ಬದ ವಿಶೇಷ ಊಟದ ವ್ಯವಸ್ಥೆಯನ್ನು ಮಕ್ಕಳಿಗೆ ಮಾಡುವಂತೆ ಆದೇಶಿಸಿದೆ. ಈ ಮೂಲಕ ರಾಜ್ಯದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ನೀಡಿದೆ.
ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದಂತ ಡಾ.ವಿಶಾಲ್ ಆರ್ ಅವರು ಸುತ್ತೋಲೆ ಹೊರಡಿಸಿದ್ದಾರೆ. ಆ ಸುತ್ತೋಲೆ ಕನ್ನಡ ನ್ಯೂಸ್ ನೌಗೆ ಲಭ್ಯವಾಗಿದ್ದೂ, ಅದರಲ್ಲಿ 2022-23ನೇ ಸಾಲಿನಲ್ಲಿ ಪಿಎಂ ಪೋಷನ್ ಮಧ್ಯಾಹ್ನದ ಉಪಹಾರ ಯೋಜನೆಯಡಿಯಲ್ಲಿ ಶಾಲಾ ಮಕ್ಕಳಿಗೆ ವಿಶೇಷ ಭೋಜನ ಮತ್ತು ಶಾಲೆಗಾಗಿ ನಾವು-ನೀವು ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿರೋದಾಗಿ ತಿಳಿಸಿದ್ದಾರೆ.
ಈ ಯೋಜನೆಯ ಅಡಿಯಲ್ಲಿ, ಶಾಲಾ ಮಕ್ಕಳ ಪೌಷ್ಠಿಕತೆಯನ್ನು ಇನ್ನಷ್ಟು ಹೆಚ್ಚಿಸಲು ಸ್ಥಳೀಯ ಸಮುದಾಯ ಪಾಲ್ಗೊಂಡು, ಅಗತ್ಯ ನೆರವು ಹಾಗೂ ಉತ್ತೇಜನ ನೀಡುವಂತೆ ಅವಕಾಶವನ್ನು ಕಲ್ಪಿಸಲಾಗಿದೆ.
ಸ್ಥಳೀಯ ಮಟ್ಟದಲ್ಲಿ, ದೇಶೀಯ ಸುಸಂಸ್ಕೃತಿಯಾಗಿ ಜಾತಿ, ಮತ, ಧರ್ಮ, ಲಿಂಗ ಭೇದವಿಲ್ಲದೇ ಸಾಮೂಹಿಕವಾಗಿ ಸ್ಥಳೀಯ ಗ್ರಾಮಸ್ಥರನ್ನು, ಪೋಷಕರನ್ನು, ಸಾರ್ವಜನಿಕರನ್ನು, ಮಕ್ಕಳನ್ನು ಆಹ್ವಾನಿಸಿ, ಊರಿನ ವಿವಿಧ ಹಬ್ಬಗಳಂದು, ರಾಷ್ಟ್ರೀಯ ಹಬ್ಬಗಳಂದು, ಊರ ಜಾತ್ರೆ, ತೇರು, ಗ್ರಾಮದೇವತೆ ಹಬ್ಬ, ಜನ್ಮದಿನಾಚರಣೆ, ಪುಣ್ಯ ಜಯಂತಿ, ಮದುವೆ, ವಾರ್ಷಿಕೋತ್ಸವಗಳು ಮೊದಲಾದ ಸಂದರ್ಭದಲ್ಲಿ ಸಾಮೂಹಿಕ ಊಟೋಪಚಾರ ಕೂಟಗಳನ್ನು, ಭೋಜನ ಸಮಾರಂಭಗಳನ್ನು ಏರ್ಪಡಿಸಿ, ಉಚಿತವಾಗಿ ಊಟ ವಿತರಣೆ ಸಂಭ್ರಮಿಸುವಂತ ಪರಿಪಾಠ ಸಾಮಾಜಿಕ ಸತ್ಕಾರ ಪದ್ದತಿ ಇದೆ ಎಂದಿದೆ.
ಶಾಲೆಯಲ್ಲಿ ವಿಶೇಷ ಭೋಜನ ಕಾರ್ಯಕ್ರಮ ಪರಿಕಲ್ಪನೆಯು ಕರ್ನಾಟಕ ರಾಜ್ಯದಲ್ಲಿ ವಿಶೇಷ ಭೋಜನ ಶಾಲೆಗಾಗಿ ನಾವು-ನೀವು ಎಂದು ನಾಮಾಂಕಿತಗೊಳಿಸಿ, ಅರ್ಥೈಸಿಕೊಳ್ಳುವಂತೆ ಸೂಚಿಸಲಾಗಿದೆ. ಈ ಕಾರ್ಯಕ್ರಮ ಅನುಷ್ಠಾನಕ್ಕೆ ಸ್ಥಳೀಯ ದಾನಿಗಳನ್ನು, ಸಂಘ-ಸಂಸ್ಥೆಗಳನ್ನು ಪಾಲುದಾರರನ್ನು ಗುರುತಿಸುವುದು ಹಾಗೂ ಸದರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಅರಿವು ಮೂಡಿಸುವಂತೆ ಹೇಳಿದೆ.
ಈ ವಿಶೇಷ ಭೋಜನ ಯೋಜನೆಯ ಅಡಿಯಲ್ಲಿ ಶಾಲಾ ಮಕ್ಕಳಿಗೆ ಹಬ್ಬದ ವಾತಾವರಣ ನಿರ್ಮಿಸಿ, ಯಾವ ರೀತಿಯ ಆಹಾರವನ್ನು ನೀಡಲಾಗುತ್ತದೆ. ಸರ್ಕಾರ ಹೊರಡಿಸಿರುವಂತ ಸುತ್ತೋಲೆಯಲ್ಲಿ ಏನಿದೆ ಎನ್ನುವ ಬಗ್ಗೆ ಮುಂದೆ ಆದೇಶ ಪ್ರತಿಯಲ್ಲಿ ಓದಿ.