ಬೆಂಗಳೂರು: ರಾಜಕಾಲುವೆ, ಉಪ ಕಾಲುವೆಗಳನ್ನು ಒತ್ತುವರಿ ಮಾಡಿ ಪ್ರವಾಹಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ, ಕೆಲ ರಾಜಕಾರಣಿಗಳನ್ನು ಮೆಚ್ಚಿಸಲು ಬಿಬಿಎಂಪಿ ಕಾಲಹರಣ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ( Farmer CM HD Kumaraswamy ) ಅವರು ನೇರ ಆರೋಪ ಮಾಡಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹಾಗೂ ಪಕ್ಷದ ಉಪನಾಯಕ ಬಂಡೆಪ್ಪ ಕಾಶೆಂಪೂರ್ ಅವರ ನೇತೃತ್ವದಲ್ಲಿ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಬೀದರ್ ಜಿಲ್ಲೆಯ ಹಲವು ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸಿ, ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಅದನ್ನು ಹೊರತುಪಡಿಸಿ ಬರೀ ಹೇಳಿಕೆಗಳಿಂದ ಉಪಯೋಗ ಇಲ್ಲ. ಮೊದಲು ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡವರಿಗೆ ಚಾಟಿ ನೀಡಬೇಕು ಎಂದು ಅವರು ಸರಕಾರವನ್ನು ಒತ್ತಾಯ ಮಾಡಿದರು.
https://kannadanewsnow.com/kannada/big-news-muruga-sri-goes-missing-again-lookout-notice-issued-by-police-fears-of-increased-arrest/
ಮಳೆ ಅನಾಹುತ ಬೆಂಗಳೂರು ಒಂದೇ ಕಡೆ ಅಲ್ಲ, ರಾಜ್ಯದ ಎಲ್ಲೆಡೆ ಆಗಿದೆ. ಸಾರ್ವಜನಿಕರಿಗೆ ಅನಾನುಕೂಲ ಆಗುವ ಪರಿಸ್ಥಿತಿ ಬಂದಿದೆ. ನಿನ್ನೆ ಮುಖ್ಯಮಂತ್ರಿಗಳು ಸಭೆ ನಡೆಸಿದ್ದಾರೆ. ಆದರೆ ಇಂಥ ಸಭೆಗಳಿಂದ ಉಪಯೋಗ ಏನು? ಅನೇಕ ಬಲಿಷ್ಠರು ರಾಜಕಾಲುವೆ, ಉಪಕಾಲುವೆ ಮುಚ್ಚಿ ಅರಮನೆಗಳನ್ನು ಕಟ್ಟಿಕೊಂಡಿದ್ದಾರೆ. ಕೆರೆಗಳನ್ನು ನುಂಗಿ ಹಾಕಿದ್ದಾರೆ. ಈ ರೀತಿ ಜಲಾವೃತ ಆಗಲು ಇಂಥ ದುರಾಸೆ ಕಾರಣ ಎಂದು ಮಾಜಿ ಮುಖ್ಯಮಂತ್ರಿಗಳು ಕಿಡಿಕಾರಿದರು.
ಪ್ರತಿ ಬಾರಿ ಮಳೆ ಬಂದಾಗಲೂ ಬೆಂಗಳೂರಿನ ಅನೇಕ ಪ್ರದೇಶಗಳು ನೀರಿನಲ್ಲಿ ತೇಲುತ್ತಿವೆ. ಈಗಲೂ ಸಹ ಸರಕಾರ ಕಠಿಣ ಕ್ರಮಕೈಗೊಳ್ಳದೆ ಮೀನಾ ಮೇಷ ಎಣಿಸುತ್ತಿದೆ ಎಂದು ಕುಮಾರಸ್ವಾಮಿ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇಂದಿನಿಂದ ಸೆ.18ರವರೆಗೆ ಈ ಜಿಲ್ಲೆಯ ವಿವಿಧೆಡೆ ‘ಮದ್ಯ ಮಾರಾಟ’ ನಿಷೇಧ | Sale of liquor banned
ಮೋಹನ್ ದಾಸ್ ಪೈ ಟ್ವೀಟ್ ನಿಂದ ಪ್ರಯೋಜನ ಇಲ್ಲ
ನಿನ್ನೆ ಉದ್ಯಮಿ ಮೋಹನ್ ದಾಸ್ ಪೈ ಅವರು ಬೆಂಗಳೂರು ಉಳಿಸಿ ಎಂದು ಪ್ರಧಾನಿಗಳಿಗೆ ಟ್ವೀಟ್ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದರೆ ಬೆಂಗಳೂರಿಗೆ ಪರಿಹಾರ ಸಿಗಲ್ಲ. ಬೆಂಗಳೂರು ಅಭಿವೃದ್ಧಿಗೆ ಯಾವ ಪಕ್ಷದ ಕೊಡುಗೆ ಎಷ್ಟಿದೆ ಅನ್ನೋದು ತಿಳಿಯಬೇಕು. ಬೆಂಗಳೂರು ರಕ್ಷಣೆ ಮಾಡುವ ಕೆಲಸ ಪ್ರಧಾನಿ ಕೈಯಲ್ಲಿ ಇಲ್ಲ. ಆ ರೀತಿ ಭಾವಿಸಿದರೆ ಅವರಿಗೆ ನಿರಾಶೆಯಾಗೋದು ಖಚಿತ. ಯಾರು ಕೆಲಸ ಮಾಡಿದ್ದಾರೆ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಮಾರ್ಮಿಕವಾಗಿ ನುಡಿದರು ಮಾಜಿ ಮುಖ್ಯಮಂತ್ರಿಗಳು.
ಸಿಎಂ ಸಿಟಿ ರೌಂಡ್ಸ್ ಫಲಶೃತಿ ಏನು?
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿಟಿ ರೌಂಡ್ಸ್ ಮಾಡಿದರು. ಏನಾದರೂ ಸಂದೇಶ ಕೊಟ್ಟರೇ? ಅದರಿಂದ ಬಂದ ಫಲಶೃತಿ ಏನು? ಯಾವುದಾದರೂ ಪರಿಹಾರ ಕೊಟ್ಟರಾ ಮುಖ್ಯಮಂತ್ರಿಗಳು? ಮುಂದೆ ಅವರು ಬೆಂಗಳೂರು ಜನರಿಗೆ ಏನು ಕೊಡುತ್ತಾರೆ ಎನ್ನುವುದನ್ನು ಕಾದು ನೋಡೋಣ ಎಂದರು ಕುಮಾರಸ್ವಾಮಿ ಅವರು.
ಮುದ್ದಹನುಮೇಗೌಡ ರಾಜೀನಾಮೆಯಿಂದ ಅಚ್ಚರಿ ಇಲ್ಲ
ಮಾಜಿ ಸಂಸದ ಮುದ್ದಹನುಮೇಗೌಡ ರಾಜೀನಾಮೆ ವಿಚಾರ ನನಗೆ ಆಶ್ಚರ್ಯ ತರುವ ಘಟನೆ ಏನಲ್ಲ. ಈಗಾಗಲೇ ಅನೇಕರು ಕಾಂಗ್ರೆಸ್ ಪಕ್ಷ ತ್ಯಜಿಸುತ್ತಾರೆ ಎಂಬ ಸುದ್ದಿ ಹರಡಿತ್ತು. ಅವರ ರಾಜೀನಾಮೆ ನನಗೆ ಅಚ್ಚರಿ ತರುವ ವಿಷಯವಲ್ಲ. ಮುಂದಿನ ದಿನಗಳಲ್ಲಿ ಬಹಳ ಬದಲಾವಣೆ ಆಗಲಿದೆ ಎಂದು ಅವರು ಭವಿಷ್ಯ ನುಡಿದರು.
ಕುತಂತ್ರ ರಾಜಕಾರಣಕ್ಕೆ ಉತ್ತರ ಸಿಗಲಿದೆ
ಜೆಡಿಎಸ್ ಪಕ್ಷದ ಬಗ್ಗೆ ಅನೇಕರು ಲಘುವಾಗಿ ಮಾತಾಡಿದ್ದರು. ನಮ್ಮ ಪಕ್ಷ ಮುಗಿಸುವ ಕೆಲಸ ಮಾಡಿದ್ದರು. ಮುಂದಿನ ದಿನಗಳಲ್ಲಿ ಉತ್ತರ ಕೊಡುವ ಕೆಲಸ ಮಾಡುತ್ತೇವೆ. ಕುತಂತ್ರ ರಾಜಕಾರಣ ಮಾಡುತ್ತಿದ್ದರು. ಅದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನೊಂದು ಪಕ್ಷದ ಮನೆ ಮುರಿದು ಸಂಘಟನೆ ಮಾಡುವುದಿಲ್ಲ
ಬೇರೆ ಪಕ್ಷದವರು ಜೆಡಿಎಸ್ ಸೇರ್ತಾರಾ ಅನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ಡಿಕೆ, ನಮ್ಮ ಪಕ್ಷದ ಸಂಘಟನೆ ನಾವೇ ಮಾಡಬೇಕು. ಇನ್ನೊಂದು ಪಕ್ಷದ ಮನೆ ಮುರಿದು ಸಂಘಟನೆ ಮಾಡುವುದಿಲ್ಲ. ಪ್ರಾಮಾಣಿಕವಾಗಿ ಸಂಘಟನೆ ಮಾಡುತ್ತೇವೆ. ಕಾಂಗ್ರೆಸ್ ಮತ್ತು ಬಿಜೆಪಿಯ ಈಗಿನ ಪರಿಸ್ಥಿತಿ ಮುಂದಿಟ್ಟು ಹೋರಾಟ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.
ನಮ್ಮ ಪಕ್ಷದ ಅಧ್ಯಕ್ಷರು ಹಾಗೂ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ಅವರ ನೇತೃತ್ವದಲ್ಲಿ ಅನೇಕರು ಪಕ್ಷ ಸೇರ್ಪಡೆ ಆಗಿದ್ದಾರೆ. ಬೆಂಗಳೂರಿನಲ್ಲಿ ಸಭೆ ನಿಗದಿಯಾಗಿತ್ತು. ಸಭೆಯಲ್ಲಿ ಅನೇಕ ವಿಚಾರಗಳನ್ನು ಚರ್ಚೆ ಮಾಡಿದ್ದೇವೆ. ವಿಶೇಷವಾಗಿ ಹೈದರಾಬಾದ್ ಕರ್ನಾಟಕ ಬಗ್ಗೆ ಚರ್ಚೆ ಮಾಡಿದ್ದೇವೆ. ನಿಮ್ಮ ಆಗಮನ ಪಕ್ಷಕ್ಕೆ ಹೆಚ್ಚಿನ ಶಕ್ತಿ ಬಂದಿದೆ. ನಿಮ್ಮ ಶಕ್ತಿಯಿಂದ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಂದಿರುವ ಆಪತ್ತಿಗೆ ಜೆಡಿಎಸ್ ಪರಿಹಾರ ಹುಡುಕಲಿದೆ ಎಂದು ಕಾರ್ಯಕರ್ತರಿಗೆ ಅವರು ಕಿವಿಮಾತು ಹೇಳಿದರು.
ಸರಕಾರ ನಡೀತಿದೆ, ಪಕ್ಷದ ನಡವಳಿಕೆ ಗಮನಿಸುತ್ತಿದ್ದಿರಾ, ಶಾಂತಿಯುತ ರಾಜ್ಯ ಇದು. ನಾವೆಲ್ಲರೂ ಸಾಮರಸ್ಯದಿಂದ ಶಾಂತಿಯುತವಾಗಿ ಬದುಕುತ್ತಿದ್ದೇವೆ. ಅದರ ಮೇಲೆ ಗದಾ ಪ್ರಹಾರ ನಡೆಯುತ್ತಿದೆ. ಸಹೋದರ ಮನೋಭಾವದಲ್ಲಿ ಹೋರಾಟ ಮಾಡಬೇಕಿದೆ. ಪಕ್ಷಕ್ಕೆ ಸೇರಿದ್ದು, ಪಕ್ಷದ ಹಾಗೂ ದೇವೇಗೌಡರ ಪರವಾಗಿ ಸ್ವಾಗತ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಮಾಜಿ ಸಚಿವರಾದ ಬಂಡೆಪ್ಪ ಖಾಷೆಂಪೂರ್, ವೆಂಕಟರಾವ್ ನಾಡಗೌಡ, ಎನ್.ಎಂ.ನಬಿ, ಮಾಜಿ ಶಾಸಕ ಟಿ.ಎ.ಶರವಣ ಮುಂತಾದವರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಬೀದರ್ ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದ ನೂರಾರು ಮುಖಂಡರು ಜೆಡಿಎಸ್ ಪಕ್ಷವನ್ನು ಸೇರಿದರು.