ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿದ್ದ ಉದ್ವಿಗ್ನತೆಯಿಂದಾಗಿ ಸ್ಥಗಿತಗೊಂಡಿದ್ದ ವಿಶ್ವದ ಅತಿ ಪ್ರಮುಖ ತೈಲ ಸಾರಿಗೆ ಮಾರ್ಗ ‘ಹಾರ್ಮುಜ್ ಜಲಸಂಧಿ’ಯನ್ನು ಇರಾನ್ ಈಗ ಸಂಪೂರ್ಣವಾಗಿ ಮುಕ್ತಗೊಳಿಸಿದೆ. ಈ ನಿರ್ಧಾರವು ಭಾರತದ ಪಾಲಿಗೆ ದೊಡ್ಡ ಸಮಾಧಾನ ತಂದಿದ್ದು, ದೇಶದ ಇಂಧನ ಭದ್ರತೆಯ ಮೇಲೆ ಎದುರಾಗಿದ್ದ ಕಾರ್ಮೋಡಗಳು ಕರಗಿವೆ.
ಭಾರತವು ತನ್ನ ಕಚ್ಚಾ ತೈಲದ ಅವಶ್ಯಕತೆಯ ಶೇ. 85 ರಷ್ಟು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಸುಮಾರು ಶೇ. 45 ರಷ್ಟು ತೈಲವು ಹಾರ್ಮುಜ್ ಜಲಸಂಧಿಯ ಮೂಲಕವೇ ಭಾರತಕ್ಕೆ ತಲುಪುತ್ತದೆ.
ಜಲಸಂಧಿಯ ಪಾರ್ಶ್ವ ಬಂದ್‌ನಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಗಗನಕ್ಕೇರಿತ್ತು. ಈಗ ಸಂಚಾರ ಮುಕ್ತವಾಗಿರುವುದರಿಂದ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರಗೊಳ್ಳುವ ನಿರೀಕ್ಷೆಯಿದೆ.
ತೈಲ ಸರಬರಾಜಿನಲ್ಲಿ ವ್ಯತ್ಯಯವಾದರೆ ಭಾರತದ ಸಾರಿಗೆ ಮತ್ತು ಉತ್ಪಾದನಾ ವಲಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಜಲಸಂಧಿ ಮುಕ್ತವಾಗಿರುವುದು ಭಾರತದ ಆರ್ಥಿಕತೆಗೆ ಬೂಸ್ಟರ್ ಡೋಸ್ ನೀಡಿದಂತಾಗಿದೆ.
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು, “ಲೆಬನಾನ್‌ನಲ್ಲಿ ನಡೆಯುತ್ತಿರುವ ಕದನ ವಿರಾಮದ ಅವಧಿಯಲ್ಲಿ ಎಲ್ಲಾ ವಾಣಿಜ್ಯ ಹಡಗುಗಳಿಗೆ ಹಾರ್ಮುಜ್ ಜಲಸಂಧಿ ಮುಕ್ತವಾಗಿರಲಿದೆ” ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ನಿಗದಿತ ಮಾರ್ಗಗಳಲ್ಲಿ ಹಡಗುಗಳು ಸುರಕ್ಷಿತವಾಗಿ ಸಂಚರಿಸಬಹುದು ಎಂದು ಅವರು ಭರವಸೆ ನೀಡಿದ್ದಾರೆ.








