ನವದೆಹಲಿ: ಆಮ್ ಆದ್ಮಿ ಪಾರ್ಟಿಯಿಂದ ಹೊರಬಂದು ಅಚ್ಚರಿ ಮೂಡಿಸಿದ್ದ ರಾಘವ್ ಚಡ್ಡಾ, ಇದೀಗ ತಮ್ಮ ನಿರ್ಧಾರದ ಹಿಂದಿನ ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದಾರೆ. “ಪಕ್ಷದ ನಾಯಕರ ತಪ್ಪು ನಿರ್ಧಾರಗಳು ಮತ್ತು ಅವರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಲು ನನ್ನ ಮನಸ್ಸು ಒಪ್ಪಲಿಲ್ಲ, ಅದಕ್ಕಾಗಿಯೇ ನಾನು ಎಎಪಿ ತೊರೆದೆ,” ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಕೆಲವು ಸ್ಫೋಟಕ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ:”ನಾವು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಈ ಪಕ್ಷವನ್ನು ಕಟ್ಟಿದ್ದೆವು. ಆದರೆ ಇಂದು ಪಕ್ಷವೇ ಅಕ್ರಮಗಳ ಕೇಂದ್ರವಾಗಿದೆ. ಇಂತಹ ವ್ಯವಸ್ಥೆಯ ಭಾಗವಾಗಿ ಮುಂದುವರಿಯುವುದು ನನ್ನ ನೈತಿಕತೆಗೆ ವಿರುದ್ಧವಾಗಿತ್ತು,” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಕ್ಷದ ಒಳಗೆ ನಡೆಯುತ್ತಿರುವ ಕೆಲವು ‘ಅಪರಾಧ’ದಂತಹ ಚಟುವಟಿಕೆಗಳ ಬಗ್ಗೆ ತಮಗೆ ಅರಿವಿತ್ತು ಎಂದು ಸೂಚ್ಯವಾಗಿ ಹೇಳಿದ ಅವರು, ಅದಕ್ಕೆ ಬೆಂಬಲ ನೀಡಲು ನಿರಾಕರಿಸಿ ಹೊರಬಂದಿದ್ದಾಗಿ ತಿಳಿಸಿದ್ದಾರೆ.”ಯಾವುದೇ ಪಕ್ಷ ಅಥವಾ ವ್ಯಕ್ತಿಗಿಂತ ದೇಶ ಮತ್ತು ಜನ ಹಿತ ಮುಖ್ಯ. ತಪ್ಪು ದಾರಿಯಲ್ಲಿ ಸಾಗುತ್ತಿರುವ ಸಂಸ್ಥೆಯಲ್ಲಿ ಇರುವುದಕ್ಕಿಂತ ಹೊರಬರುವುದೇ ಲೇಸು ಎಂದು ಈ ಕಠಿಣ ನಿರ್ಧಾರ ತೆಗೆದುಕೊಂಡೆ,” ಎಂದಿದ್ದಾರೆ.








