ಬೆಂಗಳೂರು : ರಾಜಧಾನಿ ಬೆಂಗಳೂರು ಸೇರಿದಂತೆ ಇಡೀ ರಾಜ್ಯದಲ್ಲಿ ನಾಯಿಗಳ ದಾಳಿ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಇತ್ತೀಚಿನ ಆರೋಗ್ಯ ಇಲಾಖೆಯ ಅಂಕಿ-ಅಂಶಗಳು ಈ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದ್ದು, ಪರಿಸ್ಥಿತಿಯ ಗಂಭೀರತೆಗೆ ಕೈಗನ್ನಡಿಯಾಗಿದೆ. ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಸಿಗದ ಮಟ್ಟಿಗೆ ತಲುಪುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ವಿಶೇಷವಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶ್ವಾನಗಳ ದಾಳಿ ಪ್ರಕರಣಗಳು ಮಿತಿ ಮೀರಿವೆ. ಇಲಾಖೆಯ ವರದಿಯ ಪ್ರಕಾರ, ಕೇವಲ ಬೆಂಗಳೂರು ನಗರವೊಂದರಲ್ಲೇ ಬರೋಬ್ಬರಿ 9,763 ಶ್ವಾನಗಳ ದಾಳಿ ಪ್ರಕರಣಗಳು ಪತ್ತೆಯಾಗಿವೆ. ನಗರದ ಪ್ರಮುಖ ರಸ್ತೆಗಳು, ಪಾರ್ಕ್‌ಗಳು ಮತ್ತು ವಸತಿ ಪ್ರದೇಶಗಳಲ್ಲಿ ಸಂಚರಿಸಲು ಜನಸಾಮಾನ್ಯರು, ಅದರಲ್ಲೂ ಮುಖ್ಯವಾಗಿ ಮಕ್ಕಳು ಮತ್ತು ವೃದ್ಧರು ಭಯಪಡುವಂತ ವಾತಾವರಣ ಸೃಷ್ಟಿಯಾಗಿದೆ.
ಕೇವಲ ಬೆಂಗಳೂರು ಮಾತ್ರವಲ್ಲದೆ ಇಡೀ ರಾಜ್ಯಾದ್ಯಂತ ಈ ಸಮಸ್ಯೆ ವ್ಯಾಪಕವಾಗಿದೆ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಕೇವಲ ಒಂದೇ ವಾರದಲ್ಲಿ ರಾಜ್ಯದಲ್ಲಿ ದಾಖಲಾದ ಒಟ್ಟು ನಾಯಿ ಕಡಿತದ ಪ್ರಕರಣಗಳ ಸಂಖ್ಯೆ ಬರೋಬ್ಬರಿ 13,220. ಈ ವಾರದ ಅವಧಿಯಲ್ಲಿ ನಡೆದ ಭೀಕರ ನಾಯಿ ದಾಳಿಗೆ ಇಬ್ಬರು ಅಮಾಯಕರು ಪ್ರಾಣ ಕಳೆದುಕೊಂಡಿರುವುದು ಪರಿಸ್ಥಿತಿಯ ಭೀಕರತೆಯನ್ನು ತೋರ್ಪಡಿಸುತ್ತದೆ.
ನಾಯಿ ಕಡಿತದಿಂದ ಹರಡುವ ಪ್ರಾಣಾಂತಿಕ ರೇಬಿಸ್ ರೋಗವೂ ಸಹ ರಾಜ್ಯದಲ್ಲಿ ಆತಂಕಕಾರಿ ಮಟ್ಟದಲ್ಲಿ ಏರಿಕೆಯಾಗಿದೆ. ಕಳೆದ ಐದು ತಿಂಗಳ ಅವಧಿಯಲ್ಲಿ ಬರೋಬ್ಬರಿ 20 ಜನರು ರೇಬಿಸ್ ರೋಗಕ್ಕೆ ಬಲಿಯಾಗಿದ್ದಾರೆ. ನಾಯಿ ಕಡಿತಕ್ಕೆ ಒಳಗಾದ ತಕ್ಷಣ ಸೂಕ್ತ ಚಿಕಿತ್ಸೆ ಮತ್ತು ಲಸಿಕೆ ಸಿಗದಿರುವುದು ಅಥವಾ ನಿರ್ಲಕ್ಷ್ಯ ವಹಿಸಿರುವುದು ಈ ಸಾವುಗಳಿಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
ಇನ್ನು ಪ್ರಸಕ್ತ ವರ್ಷದ ಜನವರಿಯಿಂದ ಇಂದಿನವರೆಗೆ ಇಡೀ ರಾಜ್ಯದಲ್ಲಿ ಒಟ್ಟು 2,66,367 ಜನರು ಶ್ವಾನಗಳ ದಾಳಿಗೆ ಒಳಗಾಗಿದ್ದಾರೆ. ಈ ಪೈಕಿ ನಾಯಿ ಕಡಿತ ಮತ್ತು ಅದರಿಂದ ಉಂಟಾದ ರೇಬಿಸ್‌ನಂತಹ ಗಂಭೀರ ಆರೋಗ್ಯ ಸಮಸ್ಯೆಯಿಂದಾಗಿ ಒಟ್ಟು 30 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆಯ ವರದಿ ಧೃಡಪಡಿಸಿದೆ.
ಬೆಂಗಳೂರು ನಗರದ ವಲಯವಾರು ಪರಿಸ್ಥಿತಿಯನ್ನು ಗಮನಿಸಿದರೆ, ಬೆಂಗಳೂರಿನ ಸೌತ್ ಝೋನ್ (ದಕ್ಷಿಣ ವಲಯ) ನಲ್ಲಿ ಅತ್ಯಂತ ಹೆಚ್ಚು ನಾಯಿ ದಾಳಿ ಪ್ರಕರಣಗಳು ದಾಖಲಾಗಿವೆ. ಈ ಭಾಗದಲ್ಲಿ ಬೀದಿ ನಾಯಿಗಳ ಕಾಟ ಮಿತಿಮೀರಿದ್ದು, ಬಿಬಿಎಂಪಿ (BBMP) ಮತ್ತು ಆರೋಗ್ಯ ಇಲಾಖೆ ತಕ್ಷಣವೇ ಕಾರ್ಯಪ್ರವೃತ್ತರಾಗಿ ಸಂತಾನಹರಣ ಚಿಕಿತ್ಸೆ ಹಾಗೂ ರೇಬಿಸ್ ವಿರೋಧಿ ಲಸಿಕೆ ಅಭಿಯಾನವನ್ನು ತೀವ್ರಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.








