‘ಧುರಂಧರ್’ ಚಿತ್ರದ ಪ್ರೊಡಕ್ಷನ್ ಡಿಸೈನರ್ ಸೈನಿ ಎಸ್ ಜೋಹ್ರೇ ವಿರುದ್ಧ ಚಂಡೀಗಢ ಪೊಲೀಸರು ಲೈಂಗಿಕ ಕಿರುಕುಳದ ಗಂಭೀರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಂಡೀಗಢದ ಹೋಟೆಲ್‌ವೊಂದರಲ್ಲಿ ನಡೆದ ಸಭೆಯೊಂದರಲ್ಲಿ ಜೋಹ್ರೇ ತಮಗೆ ಮದ್ಯದಲ್ಲಿ ಅಮಲು ಪದಾರ್ಥ ಬೆರೆಸಿ ನೀಡಿ, ಲೈಂಗಿಕ ಕಿರುಕುಳ ಹಾಗೂ ದೈಹಿಕ ದೌರ್ಜನ್ಯ ಎಸಗಿದ್ದಾರೆ ಮತ್ತು ಕೋಣೆಯಲ್ಲಿ ಕೂಡಿಹಾಕಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ಪ್ರಸ್ತುತ ಪೊಲೀಸರು ತನಿಖೆ ಆರಂಭಿಸಿದ್ದು, ಈ ಆರೋಪಗಳ ಬಗ್ಗೆ ಜೋಹ್ರೇ ಅವರಿಂದ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ. ನವದೆಹಲಿಯ ನಿವಾಸಿಯಾದ ಸಂತ್ರಸ್ತ ಮಹಿಳೆ ಸೆಕ್ಟರ್-17 ರ ಪೊಲೀಸ್ ಠಾಣೆಗೆ ತೆರಳಿ ವಿವರವಾದ ದೂರು ನೀಡಿದ್ದರು. ಏಪ್ರಿಲ್ 20 ರಂದು ದೂರನ್ನು ದಾಖಲಿಸಿಕೊಂಡ ಪೊಲೀಸರು, ಪ್ರಾಥಮಿಕ ತನಿಖೆಯ ನಂತರ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಪ್ರಕ್ರಿಯೆಗಳನ್ನು ಚುರುಕುಗೊಳಿಸಿದ್ದಾರೆ.
ಎಫ್ ಐಆರ್ ವಿವರ ಮತ್ತು ಲೈಂಗಿಕ ಕಿರುಕುಳದ ದೂರು
ಮಾಧ್ಯಮ ವರದಿಗಳ ಪ್ರಕಾರ, ಚಂಡೀಗಢ ಪೊಲೀಸರು ಸೈನಿ ಎಸ್ ಜೋಹ್ರೇ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 74, 79, 123 ಮತ್ತು 126(2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. “ಜೋಹ್ರೇ ತಮ್ಮನ್ನು ಚಂಡೀಗಢದ ತಾಜ್ ಹೋಟೆಲ್‌ನ ಕೋಣೆಗೆ ಕರೆಸಿಕೊಂಡಿದ್ದರು. ಅಲ್ಲಿ ಅವರು ತಮಗೆ ಲೈಂಗಿಕ ಕಿರುಕುಳ ನೀಡಿ, ದೈಹಿಕವಾಗಿ ಹಲ್ಲೆ ನಡೆಸಿ, ಕೂಡಿಹಾಕಿದ್ದರು. ಅಲ್ಲದೆ, ತಮ್ಮ ಪಾನೀಯದಲ್ಲಿ ಅಮಲು ಪದಾರ್ಥವನ್ನು ಬೆರೆಸಿದ್ದರಿಂದ ತಮ್ಮ ಆರೋಗ್ಯ ಹದಗೆಟ್ಟಿತ್ತು,” ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆರೋಪಿ ಜೋಹ್ರೇ ಮುಂಬೈನ ಅಂಧೇರಿ ವೆಸ್ಟ್‌ನಲ್ಲಿರುವ ಓಬೆರಾಯ್ ಸ್ಪ್ರಿಂಗ್ಸ್‌ನ ನಿವಾಸಿ ಎಂದು ಗುರುತಿಸಲಾಗಿದೆ. ಪೊಲೀಸರು ಸಂತ್ರಸ್ತೆ ಹಾಗೂ ಸಂಭವನೀಯ ಸಾಕ್ಷಿಗಳಿಂದ ಹೇಳಿಕೆಗಳನ್ನು ಪಡೆಯುತ್ತಿದ್ದಾರೆ. ತಾಜ್ ಹೋಟೆಲ್‌ನ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಹೋಟೆಲ್ ದಾಖಲೆಗಳನ್ನು ಸಹ ತನಿಖೆಯ ಭಾಗವಾಗಿ ಪರಿಶೀಲಿಸಲಾಗುತ್ತಿದೆ.
ಘಟನೆಯ ಹಿನ್ನೆಲೆ ಮತ್ತು ದೂರಿನ ವಿವರ
ಸಂತ್ರಸ್ತ ಮಹಿಳೆಯು ಸರ್ಕಾರಿ ಕಾಲೇಜೊಂದರಲ್ಲಿ ಓದುತ್ತಿದ್ದಾಗ ‘ಧುರಂಧರ್’ ಚಿತ್ರತಂಡದ ಸಂಪರ್ಕ ಸಿಕ್ಕಿತ್ತು. ಕಾಲೇಜಿನ ಪ್ರಾಧ್ಯಾಪಕರೊಬ್ಬರು ಆಕೆಯ ರೆಸ್ಯೂಮೆಯನ್ನು ಚಿತ್ರತಂಡಕ್ಕೆ ಹಂಚಿಕೊಂಡಿದ್ದರು. ಅದರಂತೆ ಆಕೆ ಸೆಪ್ಟೆಂಬರ್ 2, 2025 ರಂದು ಸಹಾಯಕ ಕಲಾ ನಿರ್ದೇಶಕಿಯಾಗಿ (Assistant Art Director) ಚಿತ್ರತಂಡವನ್ನು ಸೇರಿಕೊಂಡಿದ್ದರು. ಸೆಟ್‌ನಲ್ಲಿ ಜೋಹ್ರೇ ತಮಗೆ ಮಾರ್ಗದರ್ಶಕರಂತೆ ಪರಿಚಯಿಸಿಕೊಂಡು, ಆಕೆಯ ನಂಬಿಕೆಯನ್ನು ಗಳಿಸಿದ್ದರು.
ಆ ಬಳಿಕ, ಕೆಲಸದ ವಿಷಯವಾಗಿ ಚರ್ಚಿಸಲು ಜೋಹ್ರೇ ತಮ್ಮನ್ನು ಸೆಕ್ಟರ್ 17 ರಲ್ಲಿರುವ ತಾಜ್ ಹೋಟೆಲ್‌ಗೆ ಆಹ್ವಾನಿಸಿದ್ದರು ಎಂದು ಮಹಿಳೆ ತಿಳಿಸಿದ್ದಾರೆ. ಅಲ್ಲಿಗೆ ಹೋದಾಗ ಕೋಣೆಯಲ್ಲಿ ಬೇರೆ ಯಾವುದೇ ಚಿತ್ರತಂಡದ ಸದಸ್ಯರು ಇರಲಿಲ್ಲ. ಈ ಹೋಟೆಲ್ ಸಭೆಯ ಬಗ್ಗೆ ಯಾರಿಗೂ ಹೇಳದಂತೆ ಜೋಹ್ರೇ ತಮಗೆ ತಾಕೀತು ಮಾಡಿದ್ದರು, ಏಕೆಂದರೆ ಇದು ಚಿತ್ರರಂಗದಲ್ಲಿ ಅವರ ಹೆಸರಿಗೆ ಧಕ್ಕೆ ತರಬಹುದು ಎಂದು ಅವರು ವಾದಿಸಿದ್ದರು ಎಂದು ಮಹಿಳೆ ಹೇಳಿದ್ದಾರೆ.
ದೂರಿನ ಪ್ರಕಾರ, ಸೆಪ್ಟೆಂಬರ್ 10, 2025 ರಂದು ರಾತ್ರಿ ಸುಮಾರು 8.30 ರ ಸುಮಾರಿಗೆ ಜೋಹ್ರೇ ಆಕೆಗೆ ಮದ್ಯ ಸೇವಿಸುವಂತೆ ಒತ್ತಾಯಿಸಿದ್ದಾರೆ. ವೈನ್ ಮತ್ತು ರಮ್ ಅನ್ನು ಒಟ್ಟಿಗೆ ಬೆರೆಸಿ ನೀಡಿದ ಅವರು, ಆಕೆಯನ್ನು ಹತ್ತಿರಕ್ಕೆ ಎಳೆದುಕೊಂಡು ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದ್ದಾರೆ. ಇದರಿಂದ ಆಕೆಯ ಆರೋಗ್ಯ ಹದಗೆಟ್ಟು, ಬಾತ್ ರೂಂನಲ್ಲಿ ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದಾರೆ.
ಆಗ ಜೋಹ್ರೇ ಬಾತ್ ರೂಂಗೂ ಬೆನ್ನಟ್ಟಿ ಬಂದು ಆಕೆಗೆ ಅಸಭ್ಯವಾಗಿ ಸ್ಪರ್ಶಿಸಿದ್ದಾರೆ. ನಂತರ ಆಕೆಯನ್ನು ಮಂಚದ ಮೇಲೆ ತಳ್ಳಿ, ರಾತ್ರಿಯಿಡೀ ಕೋಣೆಯಲ್ಲೇ ಉಳಿಯುವಂತೆ ಒತ್ತಾಯಿಸಿದ್ದಾರೆ. ಮರುದಿನ ಬೆಳಗ್ಗೆ ಮಹಿಳೆ ಬೈಕ್ ಟ್ಯಾಕ್ಸಿ ಮೂಲಕ ಹೋಟೆಲ್‌ನಿಂದ ಹೊರಟು ಬಂದಿದ್ದಾರೆ ಎಂದು ಪೊಲೀಸ್ ವರದಿಯಲ್ಲಿ ದಾಖಲಾಗಿದೆ.
ಈ ಘಟನೆಯ ನಂತರವೂ ಜೋಹ್ರೇ ತಮಗೆ ಕಿರುಕುಳ ನೀಡುವುದನ್ನು ಮುಂದುವರಿಸಿದ್ದರು ಮತ್ತು ತಮ್ಮ ವಿರುದ್ಧವೇ ಸುಳ್ಳು ದೂರುಗಳನ್ನು ದಾಖಲಿಸಿ ಮಾನಸಿಕ ಕಿರಿಕಿರಿ ಉಂಟುಮಾಡಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.








