ಬೆಳಗಾವಿ : ಐಪಿಎಲ್ ನಲ್ಲಿ ರಾಜಸ್ಥಾನ ತಂಡದಲ್ಲಿ ಅವಕಾಶ ಕೊಡಿಸುವುದಾಗಿ ವಂಚನೆ ಎಸಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ, 23 ಲಕ್ಷ ರೂಪಾಯಿ ಪಡೆದು ವಂಚನೆ ಎಸಗಿದ್ದ ಉತ್ತರಪ್ರದೇಶ ಮೂಲದ ಸುಸಂಜನ್ ಹಾಗು ದಿವಾಕರ್ ಎನ್ನುವ ಆರೋಪಿಗಳನ್ನು ಬೆಳಗಾವಿ ಜಿಲ್ಲಾ ಸೆನ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಕುರಿತು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
ಮೇ 17 ರಂದು ಯುವ ಕ್ರಿಕೆಟಿಗ ರಾಕೇಶ್ ಯಾಡೋರೆಗೆ 23 ಲಕ್ಷ ಪಡೆದು ವಂಚನೆ ಎಸಗಿದ್ದರು. ರಾಕೇಶ್ ಹೈದರಾಬಾದ್ಗೆ ತೆರಳಿದಾಗ ಕ್ರಿಕೆಟ್ ಆಡುತ್ತಿದ್ದ ಯಾಡೋರೆ ಇನ್ಸ್ಟಾಗ್ರಾಮ್ ನಲ್ಲಿ ರಿಲ್ಸ್ ಹಾಕಿದ್ದ. ಇದನ್ನು ಗಮನಿಸಿ ರಾಕೇಶ್ ಗೆ ವಂಚಕರು ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದರು. ಬಳಿಕ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಅವಕಾಶ ಕೊಡಿಸುವುದಾಗಿ ಮೆಸೇಜ್ ಮಾಡಿದ್ದಾರೆ. ರಾಕೇಶ್ ಯಾಡೋರೆಗೆ ಕೆಲವು ಸುಳ್ಳು ದಾಖಲೆಗಳನ್ನು ಕಳುಹಿಸಿದ್ದಾರೆ. ಆನ್ಲೈನ್ ಮೂಲಕ ರಾಕೇಶ್ 23 ಲಕ್ಷಕ್ಕೂ ಹೆಚ್ಚು ಹಣ ವರ್ಗಾಯಿಸಿದ್ದಾನೆ.
ರಾಕೇಶ್ ಗೆ ತಾನು ವಂಚನೆಗೆ ಒಳಗಾಗಿದ್ದು ತಡವಾಗಿ ಅರಿವಿಗೆ ಬಂದಿತ್ತು. ಬಳಿಕ ಬೆಳಗಾವಿ ಜಿಲ್ಲಾ ಸೆನ್ ಠಾಣೆಗೆ ರಾಕೇಶ್ ಯಾಡೋರೆ ದೂರು ನೀಡಿದ್ದಾನೆ. ಉತ್ತರ ಪ್ರದೇಶದ ಸುಲ್ತಾನ್ ಪುರಕ್ಕೆ ತೆರಳಿ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಸುಸಂಜನ್ ಹಾಗೂ ದಿವಾಕರ್ ಎನ್ನುವ ಆರೋಪಿಗಳನ್ನು ಬೆಳಗಾವಿಯ ಸೆನ್ ಠಾಣೆಯ ಪೊಲೀಸರು ಬಂಧಿಸಿ ಕರೆತಂದಿದ್ದಾರೆ. ಬೆಳಗಾವಿಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪ್ರಸ್ತುತ ಇಬ್ಬರು ಸೈಬರ್ ವಂಚಕರು ಬೆಳಗಾವಿಯ ಹಿಂಡಲದ ಸೆಂಟ್ರಲ್ ಜೈಲಿನಲ್ಲಿ ಇದ್ದಾರೆ.