ಬೆಂಗಳೂರು : ನಾಲ್ಕು ವರ್ಷಗಳ ಹಿಂದೆ ಮಂಗಳೂರಿನ ಹೊರವಲಯದಲ್ಲಿ ಸಂಭವಿಸಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಶಂಕಿತ ಉಗ್ರ ಮೊಹಮ್ಮದ್ ಶಾರೀಕ್ ತಪ್ಪೊಪ್ಪಿಕೊಂಡಿದ್ದು, ಈ ಸಂಬಂಧ ಎನ್ಐಎ ವಿಶೇಷ ನ್ಯಾಯಾಲಯ ಇದೀಗ ಮೊಹಮ್ಮದ್ ಶಾಲಿತಿಗೆ 10 ವರ್ಷಗಳ ಕಾಲ ಕಡಿಮೆ ಶಿಕ್ಷೆ ಪ್ರಕಟಿಸಿ ಬೆಂಗಳೂರಿನ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಬಾಂಬ್ ಸ್ಪೋಟ ಎಸಗಿರುವುದಾಗಿ ಶಾರೀಕ್ ಕಳೆದ ಡಿಸೆಂಬರ್ನಲ್ಲಿ ತಪ್ಪೊಪ್ಪಿಗೆ ಅರ್ಜಿ ಸಲ್ಲಿಸಿದ್ದ. ಮೂರು ತಿಂಗಳ ಬಳಿಕ ನ್ಯಾಯಾಲಯ ಆರೋಪಿಯ ಅರ್ಜಿಯನ್ನು ಪುರಸ್ಕರಿಸಿತ್ತು. ಬಳಿಕ ವಾದ-ಪ್ರತಿವಾದ ನಡೆದಿತ್ತು. ಗುರುವಾರ ವಿಚಾರಣೆ ನಡೆಸಿದ ಕೋರ್ಟ್, ತಾಂತ್ರಿಕ ಕಾರಣಗಳಿಂದಾಗಿ ಅಂತಿಮ ತೀರ್ಪನ್ನು ಏ.25ಕ್ಕೆ ಮುಂದೂಡಿತ್ತು. ಇದೀಗ ಎಂದು ಬೆಂಗಳೂರಿನ ವಿಶೇಷ ನ್ಯಾಯಾಲಯ ಮಹಮ್ಮದ್ ಶಾರಿಕ್ ಗೆ 10 ವರ್ಷ ಕಠಿಣ ಶಿಕ್ಷೆ ಪ್ರಕಟಿಸಿದೆ.
ಇನ್ನು ಕೋರ್ಟ್ ತೀರ್ಪು ಪ್ರಕಟಿಸುವ ಮುನ್ನ ಆರೋಪಿ ಮೊಹಮ್ಮದ್ ಶಾರಿಕ್ ನನಗೆ ಒಬ್ಬ ಮಗಳಿದ್ದಾಳೆ ಮನೆಯಲ್ಲಿ ದುಡಿಯುವವನು ನಾನೇ. ಹೀಗಾಗಿ ಶಿಕ್ಷೆ ಪ್ರಮಾಣ ಕಡಿಮೆ ಮಾಡುವಂತೆ ಶಾರಿಕ್ ಮನವಿ ಮಾಡಿಕೊಂಡಿದ್ದಾನೆ. ಹಾಗಾಗಿ ಆತನ ಮನವಿ ಪರಿಗಣಿಸಿ 10 ವರ್ಷಗಳ ಕಾಲ ಕಠಿಣ ಶಿಕ್ಷೆ ವಿಧಿಸಿದೆ ಒಟ್ಟು ಶಿಕ್ಷೆಯಲ್ಲಿ ಇವರಿಗೆ ಅನುಭವಿಸಿರುವ ಶಿಕ್ಷೆಯನ್ನು ಕಡಿತಗೊಳಿಸಲಾಗಿದ್ದು, ಆನಂತರ ಉಳಿದ ಶಿಕ್ಷೆಯನ್ನು ಜೈಲಿನಲ್ಲಿ ಕಳೆಯಬೇಕಾಗುತ್ತದೆ.
ಪ್ರಕರಣ ಹಿನ್ನೆಲೆ:
2022ರ ನವೆಂಬರ್ 19ರಂದು ಸಂಜೆ 4.40ರ ಸುಮಾರಿಗೆ ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಟೋದಲ್ಲಿ ಶಾರೀಕ್ ತೆರಳುವಾಗ (ಐಇಡಿ) ಕುಕ್ಕರ್ ಸ್ಫೋಟಗೊಂಡಿತ್ತು. ಸ್ಫೋಟದ ರಭಸಕ್ಕೆ ಶಂಕಿತ ಉಗ್ರನ ಜೊತೆ ಆಟೋ ಚಾಲಕ ಸಹ ಗಂಭೀರ ಗಾಯಗೊಂಡಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಶಂಕಿತನನ್ನು ಬಂಧಿಸಿದ್ದರು. ಕೃತ್ಯದ ಹಿಂದೆ ಐಸಿಸ್ ನಂಟು ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ (ಯುಎಪಿಎ) ಪ್ರಕರಣ ದಾಖಲಿಸಿ ಎನ್ಐಎ ತನಿಖೆ ಕೈಗೊಂಡಿತ್ತು.
ಶಿವಮೊಗ್ಗದ ತೀರ್ಥಹಳ್ಳಿ ಮೂಲದ ಶಾರೀಕ್, ಐಸಿಎಸ್ ಹಾಗೂ ಸಿಮಿ ಉಗ್ರ ಸಂಘಟನೆಗಳಿಂದ ಪ್ರೇರಿತನಾಗಿದ್ದ. ಶಿವಮೊಗ್ಗ ಐಸಿಸ್ ಮಾಡ್ಯುಲ್ ಸದಸ್ಯನಾಗಿದ್ದ. ಈತ 2020ರಲ್ಲಿ ಮಂಗಳೂರಿನ ಗೋಡೆ ಬರಹ ಹಾಗೂ ಶಿವಮೊಗ್ಗ ತುಂಗಾ ನದಿ ತೀರದಲ್ಲಿ ನಡೆಸಿದ್ದ ಪ್ರಾಯೋಗಿಕ ಬಾಂಬ್ ಸ್ಫೋಟ ಪ್ರಕರಣಗಳ ಆರೋಪಿಯಾಗಿದ್ದಾನೆ.
ರಾಜ್ಯದ ಧರ್ಮಸ್ಥಳ, ಕದ್ರಿ ಮಂಜುನಾಥ ದೇವಾಲಯ ಸೇರಿದಂತೆ ದಕ್ಷಿಣ ಭಾರತದ ದೇವಾಲಯಗಳಲ್ಲಿ ಬಾಂಬ್ ಸ್ಫೋಟಗೊಳಿಸುವುದು ಶಂಕಿತ ಉಗ್ರರ ಹುನ್ನಾರವಾಗಿತ್ತು. ಇದೇ ಭಾಗವಾಗಿ ಕುಕ್ಕರ್ನಲ್ಲಿ ಐಇಡಿ ಇಟ್ಟು ಟೈಮರ್ ಫಿಕ್ಸ್ ಮಾಡಲಾಗಿತ್ತು. 90 ನಿಮಿಷಗಳನ್ನು ಫಿಕ್ಸ್ ಮಾಡುವ ಬದಲು, 9 ನಿಮಿಷಕ್ಕೆ ತಪ್ಪಾಗಿ ನಿಗದಿಪಡಿಸಿದ್ದರಿಂದ ಆಟೋದಲ್ಲಿ ತೆರಳುವಾಗ ಮಾರ್ಗ ಮಧ್ಯೆ ಸ್ಫೋಟಗೊಂಡಿತ್ತು. ಪ್ರಕರಣದ ಎರಡನೇ ಆರೋಪಿ ಸೈಯದ್ ಯಾಸೀನ್ನನ್ನು ಬಾಂಬ್ ತಯಾರಿಕೆಗೆ ಅಗತ್ಯವಾದ ಉಪಕರಣಗಳನ್ನು ಪೂರೈಸಿದ ಆರೋಪದಡಿ ಬಂಧಿಸಲಾಗಿತ್ತು.








