ತಾನು ನಿರುದ್ಯೋಗಿ ಎಂಬ ಕಾರಣವನ್ನು ನೀಡಿ ಪತ್ನಿ ಮತ್ತು ಅಪ್ರಾಪ್ತ ಮಗುವನ್ನು ಪೋಷಿಸುವ ಕಾನೂನುಬದ್ಧ ಜವಾಬ್ದಾರಿಯಿಂದ ಯಾವುದೇ ಪತಿ ನುಣುಚಿಕೊಳ್ಳುವಂತಿಲ್ಲ ಎಂದು ದೆಹಲಿ ನ್ಯಾಯಾಲಯವು ತೀರ್ಪು ನೀಡಿದೆ. ದೇಶೀಯ ಹಿಂಸಾಚಾರ ಪ್ರಕರಣವೊಂದರಲ್ಲಿ, ತನ್ನ ಮಗನ ನಿರ್ವಹಣೆಗಾಗಿ ಪ್ರತಿ ತಿಂಗಳು 6,000 ರೂಪಾಯಿಗಳನ್ನು ನೀಡುವಂತೆ ಪತಿಗೆ ನ್ಯಾಯಾಲಯ ನಿರ್ದೇಶಿಸಿದೆ.
ಮಹಿಳೆಯೊಬ್ಬಳಿಗೆ ಆರ್ಥಿಕ ಪರಿಹಾರವನ್ನು ನಿರಾಕರಿಸಿದ ವಿಚಾರಣಾ ನ್ಯಾಯಾಲಯದ ನಿರ್ಧಾರದ ವಿರುದ್ಧ ಮಹಿಳೆ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಶೀತಲ್ ಚೌಧರಿ ಪ್ರಧಾನ್ ಅವರು ಈ ಆದೇಶವನ್ನು ಹೊರಡಿಸಿದ್ದಾರೆ.
ನಿರ್ವಹಣಾ ಭತ್ಯೆ ತಪ್ಪಿಸಲು ನಿರುದ್ಯೋಗ ನೆಪವಲ್ಲ: ನ್ಯಾಯಾಲಯ
ಜೂನ್ 2 ರಂದು ನೀಡಿದ ತನ್ನ ಆದೇಶದಲ್ಲಿ ನ್ಯಾಯಾಲಯವು, “ತನ್ನ ವೆಚ್ಚಗಳನ್ನು ನಿರ್ವಹಿಸುವುದು ಪತಿಯ ಜವಾಬ್ದಾರಿ. ಕೇವಲ ತಾನು ಕೆಲಸವಿಲ್ಲದವನು ಅಥವಾ ತನಗೆ ಇತರ ಜವಾಬ್ದಾರಿಗಳಿವೆ ಎಂಬ ನೆಪ ಹೇಳುವುದರಿಂದ ಆತ ತನ್ನ ಕಾನೂನುಬದ್ಧ ಪತ್ನಿ ಮತ್ತು ಅಪ್ರಾಪ್ತ ಮಗನನ್ನು ಪೋಷಿಸುವ ಜವಾಬ್ದಾರಿಯಿಂದ ಮುಕ್ತನಾಗುವುದಿಲ್ಲ,” ಎಂದು ಗಮನಿಸಿದೆ ಎಂದು ಪಿಟಿಐ ವರದಿ ಮಾಡಿದೆ.
2013ರಲ್ಲಿ ಮದುವೆಯಾದ ನಂತರ, ವರದಕ್ಷಿಣೆಗಾಗಿ ಕಿರುಕುಳ, ದೈಹಿಕ ಹಲ್ಲೆ ಮತ್ತು ಮಾನಸಿಕ ಕ್ರೌರ್ಯವನ್ನು ಎದುರಿಸಿದ್ದಾಗಿ ಆ ಮಹಿಳೆ ಆರೋಪಿಸಿದ್ದರು. ಗರ್ಭಾವಸ್ಥೆಯಲ್ಲಿದ್ದಾಗ ತನ್ನನ್ನು ಮನೆಯಿಂದ ಹೊರಹಾಕಲಾಗಿದ್ದು, 2015ರಿಂದ ಮಗನನ್ನು ಒಬ್ಬಳೇ ಸಾಕುತಿರುವುದಾಗಿ ಅವರು ತಿಳಿಸಿದ್ದರು.
ದೈಹಿಕ ಹಿಂಸೆ ಮತ್ತು ಕ್ರೌರ್ಯದ ಆರೋಪಗಳಿಗೆ ವೈದ್ಯಕೀಯ ದಾಖಲೆಗಳು ಅಥವಾ ಸ್ವತಂತ್ರ ಸಾಕ್ಷ್ಯಗಳ ಕೊರತೆಯಿದೆ ಎಂದು ವಿಚಾರಣಾ ನ್ಯಾಯಾಲಯದ ಅಭಿಪ್ರಾಯವನ್ನು ಮೇಲ್ಮನವಿ ನ್ಯಾಯಾಲಯವು ಒಪ್ಪಿಕೊಂಡರೂ, ತಂದೆಯಾದವನು ಹಲವು ವರ್ಷಗಳಿಂದ ಮಗುವಿಗೆ ಆರ್ಥಿಕ ನೆರವು ನೀಡುವಲ್ಲಿ ವಿಫಲವಾಗಿದ್ದಾನೆ ಎಂಬುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತು. “ಅಪ್ರಾಪ್ತ ಮಗುವಿನ ನಿರ್ವಹಣೆಗೆ ಪತಿಯೂ ಅಷ್ಟೇ ಜವಾಬ್ದಾರನಾಗಿರುತ್ತಾನೆ” ಎಂದು ನ್ಯಾಯಾಲಯ ಹೇಳಿದೆ.
’ಶಿಕ್ಷಣವಿದ್ದ ಮಾತ್ರಕ್ಕೆ ಆರ್ಥಿಕ ಸ್ವಾವಲಂಬನೆ ಸಾಬೀತಾಗುವುದಿಲ್ಲ’
ಮಹಿಳೆ ಸುಶಿಕ್ಷಿತಳಾಗಿದ್ದಾಳೆ ಎಂಬ ಕಾರಣಕ್ಕೆ ಆಕೆಗೆ ಪರಿಹಾರ ನಿರಾಕರಿಸಬೇಕು ಎಂಬ ಪತಿಯ ವಾದವನ್ನೂ ನ್ಯಾಯಾಧೀಶರು ತಳ್ಳಿಹಾಕಿದ್ದಾರೆ. “ಸಂಪಾದಿಸುವ ಸಾಮರ್ಥ್ಯ ಮತ್ತು ವಾಸ್ತವಿಕ ಗಳಿಕೆ ಎಂಬುದು ಎರಡು ವಿಭಿನ್ನ ವಿಷಯಗಳು,” ಎಂದು ನ್ಯಾಯಾಲಯ ಗಮನಿಸಿದೆ. ಅಲ್ಲದೆ, ಪತ್ನಿ ತನಗೆ ಮತ್ತು ಮಗುವಿಗೆ ಬೆಂಬಲ ನೀಡಲು ಸಾಕಷ್ಟು ಗಳಿಸುತ್ತಿದ್ದಾಳೆ ಎಂಬುದಕ್ಕೆ ಪತಿಯು ಯಾವುದೇ ಸಾಕ್ಷ್ಯವನ್ನು ಒದಗಿಸಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಅಲ್ಲದೆ, ವಿಚಾರಣಾ ನ್ಯಾಯಾಲಯವು ಹಲವು ಅವಕಾಶಗಳನ್ನು ನೀಡಿದ್ದರೂ, ಪತಿಯು ತನ್ನ ಆದಾಯದ ಅಫಿಡವಿಟ್ ಸಲ್ಲಿಸುವಲ್ಲಿ ಪದೇ ಪದೇ ವಿಫಲನಾಗಿದ್ದಾನೆ ಎಂದು ನ್ಯಾಯಾಲಯ ಗಮನಿಸಿದೆ.
”ಪ್ರಸ್ತುತ ಆದೇಶದ ದಿನಾಂಕದಿಂದ ಮಗುವಿಗೆ ಪ್ರಾಯಪೂರ್ವಕ್ಕೆ (Major) ಬರುವವರೆಗೆ, ಆತನ ನಿರ್ವಹಣೆಗಾಗಿ ತಿಂಗಳಿಗೆ 6,000 ರೂ.ಗಳನ್ನು ಪಾವತಿಸಲು ಪತಿಯು ಸಮರ್ಥನಾಗಿದ್ದಾನೆ ಎಂದು ನಾನು ಪರಿಗಣಿಸುತ್ತೇನೆ,” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.








