ಬಳ್ಳಾರಿ: ವಿದ್ಯಾಕೇಂದ್ರವಾಗಬೇಕಿದ್ದ ವಿಶ್ವವಿದ್ಯಾಲಯವೊಂದು ಈಗ ಅಕ್ರಮದ ಅಡ್ಡಯಾಗಿ ಮಾರ್ಪಟ್ಟಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬಳ್ಳಾರಿಯ ಪ್ರತಿಷ್ಠಿತ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ (VSKU) ಹಣ ಪಡೆದು ವಿದ್ಯಾರ್ಥಿಗಳನ್ನು ಪಾಸ್ ಮಾಡಿಸುವ ಬೃಹತ್ ದಂಧೆಯೊಂದು ಬಯಲಾಗಿದ್ದು, ಶೈಕ್ಷಣಿಕ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಒಂದು ವಿಷಯಕ್ಕೆ 6 ಸಾವಿರ ರೂಪಾಯಿ ಫಿಕ್ಸ್!
ವಿಶ್ವವಿದ್ಯಾಲಯದಲ್ಲಿ ಕಳೆದ ಹಲವು ವರ್ಷಗಳಿಂದ ಈ ಒಂದು ‘ಪಾಸ್ ದಂಧೆ’ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಪರೀಕ್ಷೆಗಳಲ್ಲಿ ಫೇಲ್ ಆದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಈ ಜಾಲ ಕೆಲಸ ಮಾಡುತ್ತಿತ್ತು. ಅನುತ್ತೀರ್ಣರಾದ ವಿದ್ಯಾರ್ಥಿಗಳಿಂದ ಒಂದು ವಿಷಯಕ್ಕೆ ಬರೋಬ್ಬರಿ 6,00ರುಪಾಯಿಗಳನ್ನು ವಸೂಲಿ ಮಾಡಿ, ಅವರನ್ನು ಅಕ್ರಮವಾಗಿ ಪಾಸ್ ಮಾಡಿಸಲಾಗುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಸಿಬ್ಬಂದಿಗಳ ಆಡಿಯೋ ಲೀಕ್: ಸಿಕ್ಕಿಬಿದ್ದ ಕಿಂಗ್‌ಪಿನ್‌ಗಳು
ವಿಶ್ವವಿದ್ಯಾಲಯದ UCMC ವಿಭಾಗದ ಸಿಬ್ಬಂದಿಗಳೇ ಈ ದಂಧೆಯ ಮುಖ್ಯ ರೂವಾರಿಗಳು ಎನ್ನಲಾಗಿದೆ. ಈ ವಿಭಾಗದ ರಿಯಾಜ್, ವೆಂಕಟೇಶ್ ವನದುರ್ಗ, ಯಲ್ಲಾಲಿಂಗ, ಚಂದ್ರಮೋಹನ ಹಾಗೂ ಉಮೇಶ್ ಎಂಬುವವರ ಮೇಲೆ ನೇರ ಆರೋಪ ಕೇಳಿಬಂದಿದೆ. ಇದಕ್ಕೆ ಪುಷ್ಟಿ ನೀಡುವಂತೆ, ಸಿಬ್ಬಂದಿಗಳಾದ ವೆಂಕಟೇಶ್ ಮತ್ತು ರಿಯಾಜ್ ಎಂಬುವವರು ವಿದ್ಯಾರ್ಥಿಗಳೊಂದಿಗೆ ಹಣದ ವ್ಯವಹಾರದ ಕುರಿತು ಮಾತನಾಡಿರುವ ಆಡಿಯೋ ಸಂಭಾಷಣೆ ಈಗ ಬಹಿರಂಗವಾಗಿದ್ದು, ವಿಶ್ವವಿದ್ಯಾಲಯದ ಕರ್ಮಕಾಂಡವನ್ನು ಜಗಜ್ಜಾಹೀರು ಮಾಡಿದೆ.
ಆಕ್ರೋಶದ ಜ್ವಾಲೆ: ಎಬಿವಿಪಿ ತೀವ್ರ ಪ್ರತಿಭಟನೆ
ವಿಶ್ವವಿದ್ಯಾಲಯದ ಈ ಭ್ರಷ್ಟಾಚಾರದ ವಿರುದ್ಧ ವಿದ್ಯಾರ್ಥಿ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಘಟನೆಯನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ತಪ್ಪಿತಸ್ಥ ಸಿಬ್ಬಂದಿಗಳನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಬೇಕು ಮತ್ತು ಈ ಹಗರಣದ ಸಮಗ್ರ ತನಿಖೆಯಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಭವಿಷ್ಯದ ಜೊತೆ ಆಟ: ತನಿಖೆಗೆ ಒತ್ತಾಯ
ಪ್ರಾಮಾಣಿಕವಾಗಿ ಓದಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಈ ದಂಧೆ ಭಾರೀ ಅನ್ಯಾಯ ಎಸಗಿದೆ. ಹಣವಿದ್ದವರು ಸುಲಭವಾಗಿ ಪದವಿ ಪಡೆದುಕೊಳ್ಳುವ ಇಂತಹ ವ್ಯವಸ್ಥೆಯಿಂದಾಗಿ ವಿಶ್ವವಿದ್ಯಾಲಯದ ಘನತೆಗೆ ಧಕ್ಕೆಯಾಗಿದೆ. ಸದ್ಯ ಆಡಿಯೋ ಸಾಕ್ಷ್ಯಗಳು ಲಭ್ಯವಿರುವುದರಿಂದ, ಉನ್ನತ ಶಿಕ್ಷಣ ಇಲಾಖೆ ಹಾಗೂ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಈ ಭ್ರಷ್ಟ ಸಿಬ್ಬಂದಿಗಳ ವಿರುದ್ಧ ಯಾವ ರೀತಿಯ ಕಾನೂನು ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.








