ನೀವು ದಿನವಿಡೀ ಸ್ಮಾರ್ಟ್ ಫೋನ್ ಅಥವಾ ಲ್ಯಾಪ್ ಟಾಪ್ ಗಳಲ್ಲೇ ಮುಳುಗಿರುತ್ತೀರಾ? ನಿಮ್ಮ ಕೈಗಳಲ್ಲಿ ನೋವು ಅಥವಾ ಮರಗಟ್ಟುವಿಕೆ ಕಾಣಿಸಿಕೊಳ್ಳುತ್ತಿದೆಯೇ? ಒಂದು ಕಾಲದಲ್ಲಿ ಕೇವಲ ವೃದ್ಧರಲ್ಲಿ ಮಾತ್ರ ಕಂಡುಬರುತ್ತಿದ್ದ ಮಣಿಕಟ್ಟು ಮತ್ತು ಬೆರಳುಗಳ ಸಮಸ್ಯೆಗಳು ಈಗ ಯುವ ಪೀಳಿಗೆಯನ್ನು ಕಾಡುತ್ತಿವೆ. ನಮ್ಮ ಇಂದಿನ ಡಿಜಿಟಲ್ ಹವ್ಯಾಸಗಳು ಕೈಗಳ ಬಲವನ್ನು ಕುಂದಿಸುತ್ತಿವೆಯೇ? ಇಷ್ಟಕ್ಕೂ ಏನಿದು ‘ಟೆಕ್ಸ್ಟ್ ಕ್ಲಾ’ (Text Claw) ಸಮಸ್ಯೆ? ಆಧುನಿಕ ಜೀವನಶೈಲಿಯಿಂದ ಯುವಕರನ್ನು ಕಾಡುತ್ತಿರುವ ಈ ಕಾಯಿಲೆ ಮತ್ತು ಅದರ ಗಂಭೀರ ಆರೋಗ್ಯ ಪರಿಣಾಮಗಳ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
ಏನಿದು ‘ಟೆಕ್ಸ್ಟ್ ಕ್ಲಾ’?
‘ಟೆಕ್ಸ್ಟ್ ಕ್ಲಾ’ ಎಂಬುದು ಯಾವುದೇ ಅಧಿಕೃತ ವೈದ್ಯಕೀಯ ಹೆಸರಲ್ಲದಿದ್ದರೂ, ದೀರ್ಘಕಾಲದವರೆಗೆ ಮೊಬೈಲ್ ಅಥವಾ ಟ್ಯಾಬ್ಲೆಟ್ಗಳನ್ನು ಬಳಸುವುದರಿಂದ ಬೆರಳುಗಳು, ಮಣಿಕಟ್ಟು ಮತ್ತು ಕೈಗಳ ನರಗಳ ಮೇಲಾಗುವ ಒತ್ತಡವನ್ನು ಸೂಚಿಸುವ ಪದವಾಗಿದೆ. ನಿರಂತರವಾಗಿ ಟೈಪ್ ಮಾಡುವುದು, ಫೋನ್ ಅನ್ನು ಗಟ್ಟಿಯಾಗಿ ಹಿಡಿದುಕೊಳ್ಳುವುದು ಮತ್ತು ಮಣಿಕಟ್ಟನ್ನು ಅಸ್ವಾಭಾವಿಕ ಭಂಗಿಯಲ್ಲಿ ಇಡುವುದರಿಂದ ಸ್ನಾಯುಗಳು ಹಾಗೂ ಕೀಲುಗಳ ಮೇಲೆ ತೀವ್ರ ಒತ್ತಡ ಬೀಳುತ್ತದೆ. ಕಾಲಕ್ರಮೇಣ ಇದು ನೋವು, ಬಿಗಿತ, ಮರಗಟ್ಟುವಿಕೆ ಮತ್ತು ಸ್ನಾಯುಗಳ ಆಯಾಸಕ್ಕೆ ಕಾರಣವಾಗುತ್ತದೆ.
ಪ್ರಮುಖ ಆರೋಗ್ಯ ಸಮಸ್ಯೆಗಳು
ಹೆಬ್ಬೆರಳಿನ ಮೇಲಾಗುವ ಪರಿಣಾಮ: ಮೆಸೇಜ್ ಕಳುಹಿಸುವಾಗ ಅಥವಾ ಸ್ಕ್ರಾಲ್ ಮಾಡುವಾಗ ಹೆಬ್ಬೆರಳನ್ನು ಅತಿಯಾಗಿ ಚಲಿಸುವುದರಿಂದ ಸ್ನಾಯುರಜ್ಜುಗಳು (Tendons) ಊದಿಕೊಂಡು ನೋವು ಕಾಣಿಸಿಕೊಳ್ಳುತ್ತದೆ.
ಸ್ಮಾರ್ಟ್ಫೋನ್ ಪಿಂಕಿ: ತೂಕವಿರುವ ದೊಡ್ಡ ಫೋನ್ಗಳನ್ನು ಹಿಡಿದುಕೊಳ್ಳಲು ಕಿರುಬೆರಳನ್ನು ಆಧಾರವಾಗಿ ಬಳಸುವುದರಿಂದ ಆ ಬೆರಳಿನ ಮೇಲೆ ಹೆಚ್ಚುವರಿ ಒತ್ತಡ ಬೀಳುತ್ತದೆ.
ಗಂಭೀರ ಕಾಯಿಲೆಗಳ ಅಪಾಯ: ಮೊಬೈಲ್ ಅತಿಯಾದ ಬಳಕೆಯಿಂದ ‘ಟೆಂಡೈನಿಟಿಸ್’, ‘ಟ್ರಿಗ್ಗರ್ ಫಿಂಗರ್’, ‘ಕಾರ್ಪಲ್ ಟನಲ್ ಸಿಂಡ್ರೋಮ್’ ಮತ್ತು ಮುಂಗೈ ಸ್ನಾಯುಗಳ ಸೆಳೆತದಂತಹ ಗಂಭೀರ ಸಮಸ್ಯೆಗಳು ಎದುರಾಗಬಹುದು. ಬೆರಳುಗಳು ಮರಗಟ್ಟುವುದು, ಮಣಿಕಟ್ಟಿನಲ್ಲಿ ಅಸ್ವಸ್ಥತೆ ಮತ್ತು ವಸ್ತುಗಳನ್ನು ಗಟ್ಟಿಯಾಗಿ ಹಿಡಿಯಲು ಸಾಧ್ಯವಾಗದಿರುವುದು ಇದರ ಪ್ರಮುಖ ಲಕ್ಷಣಗಳಾಗಿವೆ.
ತಡೆಗಟ್ಟುವ ಕ್ರಮಗಳು ಹೇಗೆ?
ನಿಯಮಿತ ವಿರಾಮ ತಗೊಳ್ಳಿ: ಪ್ರತಿ 30 ರಿಂದ 45 ನಿಮಿಷಗಳಿಗೊಮ್ಮೆ ಮೊಬೈಲ್ ಬಳಕೆಯಿಂದ ವಿರಾಮ ತೆಗೆದುಕೊಳ್ಳಿ. ಕೈಗಳು ಮತ್ತು ಮಣಿಕಟ್ಟನ್ನು ಸ್ಟ್ರೆಚ್ ಮಾಡುವುದನ್ನು ಮರೆಯಬೇಡಿ.
ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಿ: ಟೈಪಿಂಗ್ ಮಾಡಲು ಎರಡೂ ಕೈಗಳನ್ನು ಬಳಸಿ. ಸಾಧ್ಯವಾದಷ್ಟು ‘ವಾಯ್ಸ್ ಟೈಪಿಂಗ್’ (ಮಾತನಾಡುವ ಮೂಲಕ ಟೈಪ್ ಮಾಡುವುದು) ಆಯ್ಕೆಯನ್ನು ಆರಿಸಿಕೊಳ್ಳಿ. ಫೋನ್ ಅನ್ನು ಕೈಯಲ್ಲೇ ಹಿಡಿದುಕೊಳ್ಳುವ ಬದಲು ಸ್ಟ್ಯಾಂಡ್ ಅಥವಾ ಹೋಲ್ಡರ್ ಬಳಸಿ.
ಭಂಗಿಯನ್ನು ಬದಲಾಯಿಸಿ: ಮೊಬೈಲ್ ಸ್ಕ್ರೀನ್ ಅನ್ನು ಕಣ್ಣಿನ ನೇರಕ್ಕೆ ಇಟ್ಟುಕೊಳ್ಳಿ. ಸರಿಯಾಗಿ ಕುಳಿತುಕೊಳ್ಳುವ ಭಂಗಿಯನ್ನು ಪಾಲಿಸುವುದರಿಂದ ಕೈಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಎರ್ಗೋನಾಮಿಕ್ ಕೀಬೋರ್ಡ್ ಮತ್ತು ಮೌಸ್ ಬಳಸುವುದು ಕೈಗಳಿಗೆ ಒಳ್ಳೆಯದು.
ಲಘು ವ್ಯಾಯಾಮ ಮಾಡಿ: ಮಣಿಕಟ್ಟಿನ ಸ್ಟ್ರೆಚಿಂಗ್, ಬೆರಳುಗಳ ವ್ಯಾಯಾಮ ಮತ್ತು ಮುಂಗೈ ಸ್ನಾಯುಗಳ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡುವುದರಿಂದ ಕೈಗಳ ಬಲ ಮತ್ತು ಚುರುಕುತನವನ್ನು ಹೆಚ್ಚಿಸಿಕೊಳ್ಳಬಹುದು.
ಗಮನಿಸಿ: ಡಿಜಿಟಲ್ ಉಪಕರಣಗಳು ನಮ್ಮ ಜೀವನವನ್ನು ಸುಲಭಗೊಳಿಸಿರಬಹುದು, ಆದರೆ ಅವುಗಳ ಅತಿಯಾದ ಬಳಕೆ ಕೈಗಳ ಆರೋಗ್ಯಕ್ಕೆ ಮಾರಕವಾಗುತ್ತಿದೆ. ಕೈ ನೋವಿನ ಲಕ್ಷಣಗಳು ಕೆಲವು ವಾರಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ ಅಥವಾ ಕೈಗಳಲ್ಲಿ ದೌರ್ಬಲ್ಯ ಹೆಚ್ಚಾದರೆ, ತಕ್ಷಣವೇ ವೈದ್ಯರನ್ನು ಅಥವಾ ಫಿಸಿಯೋಥೆರಪಿಸ್ಟ್ಗಳನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಸೂಕ್ತ. ದೈನಂದಿನ ಜೀವನದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ‘ಟೆಕ್ಸ್ಟ್ ಕ್ಲಾ’ ಸಮಸ್ಯೆಯಿಂದ ದೂರವಿರಬಹುದು.








