ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ದಿಢೀರ್ ಬಿರುಸಿನ ಬೆಳವಣಿಗೆಗಳು ಆರಂಭವಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತುರ್ತು ಬುಲಾವ್ ನೀಡಿದೆ. ಈ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ ದೆಹಲಿ ಪ್ರವಾಸ ಕೈಗೊಳ್ಳುವ ಸುಳಿವು ನೀಡಿರುವುದು ಕೈ ಪಾಳಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಂಜೆ 7 ಗಂಟೆಗೆ ರಾಜಧಾನಿ ದೆಹಲಿಗೆ ತೆರಳಲಿದ್ದಾರೆ. ಹೈಕಮಾಂಡ್‌ನಿಂದ ದಿಢೀರ್ ಕರೆ ಬಂದ ಹಿನ್ನೆಲೆಯಲ್ಲಿ ಸಿಎಂ ತಮ್ಮ ಮುಂಚಿತ ಕಾರ್ಯಕ್ರಮಗಳನ್ನು ಬದಿಗೊತ್ತಿ ಹೊರಡಲು ಸಿದ್ಧತೆ ನಡೆಸಿದ್ದಾರೆ. ಸಚಿವ ಸಂಪುಟ ಪುನಾರಚನೆ, ನಿಗಮ ಮಂಡಳಿ ನೇಮಕಾತಿ ಅಥವಾ ರಾಜ್ಯ ಸರ್ಕಾರದ ಪ್ರಮುಖ ಆಡಳಿತಾತ್ಮಕ ವಿಷಯಗಳ ಕುರಿತು ಚರ್ಚಿಸಲು ಹೈಕಮಾಂಡ್ ಈ ಬುಲಾವ್ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಡಿಕೆಶಿ ‘ದೆಹಲಿ’ ಬಾಂಬ್!
ಸಿಎಂ ದೆಹಲಿ ಪ್ರವಾಸದ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, “ನನ್ನನ್ನು ಕರೆದರೆ ನಾನು ಸಹ ದೆಹಲಿಗೆ ಹೋಗುತ್ತೇನೆ” ಎಂದು ಹೇಳುವ ಮೂಲಕ ಹೊಸ ರಾಜಕೀಯ ಬಾಂಬ್ ಸಿಡಿಸಿದ್ದಾರೆ. ಹೈಕಮಾಂಡ್‌ನಿಂದ ತಮಗೆ ಅಧಿಕೃತವಾಗಿ ಇನ್ನು ಯಾವುದೇ ಕರೆ ಬರದಿದ್ದರೂ, ಇಂದೇ ದೆಹಲಿಗೆ ಹೋಗಲು ಡಿಕೆಶಿ ಆಂತರಿಕವಾಗಿ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಹೈಕಮಾಂಡ್ ನಾಯಕರ ಭೇಟಿಗೆ ಪ್ಲಾನ್
ಸದ್ಯದ ಮಾಹಿತಿ ಪ್ರಕಾರ, ಹೈಕಮಾಂಡ್‌ನಿಂದ ನೇರ ಆಹ್ವಾನ ಇಲ್ಲದಿದ್ದರೂ ಸಹ ಡಿ.ಕೆ. ಶಿವಕುಮಾರ್ ಅವರು ಇಂದೇ ಸಿಎಂ ಸಿದ್ದರಾಮಯ್ಯ ಅವರ ಜೊತೆಯಲ್ಲೇ ಅಥವಾ ಅವರ ಬೆನ್ನಲ್ಲೇ ದೆಹಲಿಗೆ ಹಾರುವ ಸಾಧ್ಯತೆ ದಟ್ಟವಾಗಿದೆ. ಅಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಸೇರಿದಂತೆ ಪ್ರಮುಖ ವರಿಷ್ಠರನ್ನು ಭೇಟಿಯಾಗಿ ರಾಜ್ಯ ರಾಜಕಾರಣದ ವಿದ್ಯಮಾನಗಳ ಕುರಿತು ಚರ್ಚಿಸಲು ಅವರು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಸಿಎಂ ಮತ್ತು ಡಿಸಿಎಂ ಇಬ್ಬರೂ ಏಕಕಾಲಕ್ಕೆ ದೆಹಲಿ ಪ್ರವಾಸ ಕೈಗೊಳ್ಳುತ್ತಿರುವುದು ಹಲವು ರಾಜಕೀಯ ಲೆಕ್ಕಾಚಾರಗಳಿಗೆ ಎಡೆಮಾಡಿಕೊಟ್ಟಿದೆ. ಸರ್ಕಾರದ ಆಡಳಿತದ ಮೇಲಿನ ಹಿಡಿತ, ಪಕ್ಷದ ಸಂಘಟನೆ ಹಾಗೂ ಮುಂಬರುವ ರಾಜಕೀಯ ಬೆಳವಣಿಗೆಗಳ ದೃಷ್ಟಿಯಿಂದ ಈ ಜಂಟಿ ಅಥವಾ ಸರಣಿ ಭೇಟಿಗಳು ಅತ್ಯಂತ ಮಹತ್ವ ಪಡೆದುಕೊಂಡಿವೆ.








