ಬೆಂಗಳೂರು: ಕರ್ನಾಟಕದ ನಿಯೋಜಿತ ಮುಖ್ಯಮಂತ್ರಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ನಾಳೆ (ಜೂನ್ 3, 2026) ಮಧ್ಯಾಹ್ನದ ನಂತರ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿಗಳ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅರ್ಧ ದಿನ ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಜೂನ್ 3ರ ಬುಧವಾರದಂದು ಅಪರಾಹ್ನ 4:05 ಗಂಟೆಗೆ ಬೆಂಗಳೂರಿನ ‘ಕರ್ನಾಟಕ ಲೋಕಭವನ’ದಲ್ಲಿ ನೂತನ ಮುಖ್ಯಮಂತ್ರಿಯವರ ಪ್ರಮಾಣ ವಚನ ಸಮಾರಂಭ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಲೋಕಭವನ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಸಾರ್ವಜನಿಕ ಜನಸಂದಣಿ ಸೇರುವ ಸಾಧ್ಯತೆಯಿದೆ ಹಾಗೂ ವಾಹನ ಸಂಚಾರ ದಟ್ಟಣೆ (ಟ್ರಾಫಿಕ್ ಜಾಮ್) ಉಂಟಾಗುವ ಸಂಭವವಿದೆ.
ಭದ್ರತೆ, ಸುರಕ್ಷತೆ ಮತ್ತು ಸುಗಮ ಸಂಚಾರ ನಿರ್ವಹಣೆಯ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿಗಳ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಜೂನ್ 3ರ ಅಪರಾಹ್ನ (ಮಧ್ಯಾಹ್ನದ ನಂತರ) ರಜೆ ಘೋಷಿಸಲಾಗಿದೆ.
ರಾಜ್ಯಪಾಲರ ಆದೇಶದ ಮೇರೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಕಾರ್ಯಕಾರಿ) ಸರ್ಕಾರದ ಅಧೀನ ಕಾರ್ಯದರ್ಶಿ ಆರ್. ಯದು ಕುಮಾರ್ ಅವರು ಈ ಅಧಿಕೃತ ಅಧಿಸೂಚನೆಯನ್ನು (ಸಂಖ್ಯೆ: ಸಿಆಸುಇ 68 ಹೆಚ್ಇಟಿ 2026) ಹೊರಡಿಸಿದ್ದಾರೆ.









