ಬೆಳಗಾವಿ : ತಡರಾತ್ರಿ ಬೆಳಗಾವಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ ಒಂದು ನಡೆದಿದ್ದು ಇಲ್ಲಿನ ಖ್ಯಾತ ವಕೀಲರಾದ ಪೂಜಾ ಕಾಕತಕರ್ ಅವರ ಮಂಡೋಳಿ ರಸ್ತೆಯ ನಿವಾಸದ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ಶನಿವಾರ ಮಧ್ಯರಾತ್ರಿ ನಡೆದಿದೆ. ಘಟನೆಯಿಂದ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಶನಿವಾರ ಮಧ್ಯರಾತ್ರಿ ಸುಮಾರು 1 ರಿಂದ 2 ಗಂಟೆಯ ಸುಮಾರಿಗೆ ಈ ದಾಳಿ ನಡೆದಿದ್ದು, ದುಷ್ಕರ್ಮಿಗಳು ಪೂಜಾ ಅವರ ಮನೆಯ ಮೊದಲ ಮಹಡಿಯನ್ನು ಗುರಿಯಾಗಿಸಿಕೊಂಡು ಫೈರಿಂಗ್ ನಡೆಸಿದ್ದಾರೆ. ಆ ಸಮಯದಲ್ಲಿ ಮೊದಲ ಮಹಡಿಯ ಕೊಠಡಿಯಲ್ಲಿ ಪೂಜಾ ಅವರ ಪುತ್ರಿ ಸಂಸ್ಕೃತಿ ಪರೀಕ್ಷೆಗೆ ಅಂತಾ ಓದುತ್ತಿದ್ದರು. ಗುಂಡು ಕಿಟಕಿಯ ಗ್ಲಾಸ್‌ಗೆ ಬಡಿದಿದ್ದು, ಅದೃಷ್ಟವಶಾತ್ ಸಂಸ್ಕೃತಿ ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಮತ್ತು ಸೋಕೋ ತಂಡ ಪರಿಶೀಲನೆ ನಡೆಸಿದೆ. ಕಿಟಕಿಯ ಗಾಜಿನ ಮೇಲಿರುವ ಗುಂಡಿನ ಗುರುತುಗಳು ಮತ್ತು ಪತ್ತೆಯಾದ ಗುಂಡಿನ ಅಂಶಗಳನ್ನು ಹೆಚ್ಚಿನ ತನಿಖೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಪೂಜಾ ಅವರು ಕಳೆದ 18 ವರ್ಷಗಳಿಂದ ವಕೀಲಿಕೆ ವೃತ್ತಿಯಲ್ಲಿದ್ದು, ವೃತ್ತಿ ವೈಷಮ್ಯ ಅಥವಾ ಬೇರೆ ಯಾವುದಾದರೂ ಕಾರಣಕ್ಕೆ ಈ ದಾಳಿ ನಡೆದಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸದ್ಯಕ್ಕೆ ಪೂಜಾ ಅವರ ಕುಟುಂಬಕ್ಕೆ ಪೊಲೀಸರು ಸೂಕ್ತ ರಕ್ಷಣೆ ನೀಡಿದ್ದಾರೆ. ಇನ್ನು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಎಫ್‌ಎಸ್‌ಎಲ್ ವರದಿ ಬಂದ ಬಳಿಕ ದಾಳಿಗೆ ಬಳಸಿದ ಶಸ್ತ್ರಾಸ್ತ್ರಗಳ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ಪೊಲೀಸರು ಮಾಹಿತಿ ನೀಡಿದರು.








