ಲಂಡನ್: ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಸಾಮಾಜಿಕ ಜಾಲತಾಣಗಳ (Social Media) ಅತಿಯಾದ ಬಳಕೆ ಮತ್ತು ಅದರಿಂದ ಎದುರಾಗುತ್ತಿರುವ ಆನ್ ಲೈನ್ ಸುರಕ್ಷತೆಯ ಭೀತಿಯನ್ನು ನಿಯಂತ್ರಿಸಲು ಬ್ರಿಟನ್ (UK) ಸರ್ಕಾರ ಅತ್ಯಂತ ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸೋಶಿಯಲ್ ಮೀಡಿಯಾ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲು ಯುಕೆ ಸರ್ಕಾರ ಹೊಸ ಯೋಜನೆಯನ್ನು ಸಿದ್ಧಪಡಿಸುತ್ತಿದೆ.
ಆನ್ಲೈನ್ ಸುರಕ್ಷತೆಯೇ ಪ್ರಮುಖ ಆದ್ಯತೆ:
ವಿಶ್ವದಾದ್ಯಂತ ಅಪ್ರಾಪ್ತ ವಯಸ್ಕರು ಆನ್ಲೈನ್ ವಂಚನೆಗಳು, ಸೈಬರ್ ಬುಲ್ಲಿಂಗ್ (ಚಡಾಯಿಸುವುದು) ಮತ್ತು ಮಾನಸಿಕ ಖಿನ್ನತೆಗೆ ಒಳಗಾಗುತ್ತಿರುವುದು ಜಾಗತಿಕ ಕಳವಳಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಬ್ರಿಟನ್ ಸರ್ಕಾರವು ಮಕ್ಕಳ ಹಿತದೃಷ್ಟಿಯಿಂದ ಈ ಕಠಿಣ ಕ್ರಮಕ್ಕೆ ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. ತಂತ್ರಜ್ಞಾನ ಕಂಪನಿಗಳು ಮಕ್ಕಳನ್ನು ಆನ್ಲೈನ್ ಅಪಾಯಗಳಿಂದ ರಕ್ಷಿಸಲು ವಿಫಲವಾದರೆ ಭಾರೀ ದಂಡವನ್ನು ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಲಾಗುತ್ತಿದೆ.
ಪೋಷಕರಿಂದ ವ್ಯಾಪಕ ಬೆಂಬಲ:
ಮಕ್ಕಳ ಸ್ಮಾರ್ಟ್ಫೋನ್ ಮತ್ತು ಸೋಶಿಯಲ್ ಮೀಡಿಯಾ ವ್ಯಸನದಿಂದ ಕಂಗಾಲಾಗಿದ್ದ ಪೋಷಕರು ಹಾಗೂ ಮಕ್ಕಳ ಹಕ್ಕುಗಳ ಸಂಘಟನೆಗಳು ಸರ್ಕಾರದ ಈ ಪ್ರಸ್ತಾವನೆಗೆ ವ್ಯಾಪಕ ಬೆಂಬಲ ವ್ಯಕ್ತಪಡಿಸುತ್ತಿವೆ. ಜಾಲತಾಣಗಳಲ್ಲಿ ಹರಿದಾಡುವ ಅಶ್ಲೀಲ ಮತ್ತು ಹಿಂಸಾತ್ಮಕ ಕಂಟೆಂಟ್ಗಳಿಂದ ಮಕ್ಕಳ ಮನಸ್ಸಿನ ಮೇಲಾಗುವ ದುಷ್ಪರಿಣಾಮಗಳನ್ನು ತಡೆಯಲು ಇದು ಸರಿಯಾದ ಕ್ರಮ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ಆಸ್ಟ್ರೇಲಿಯಾ ಸೇರಿದಂತೆ ಕೆಲವು ದೇಶಗಳು ಇಂತಹದ್ದೇ ಕಠಿಣ ಕಾನೂನುಗಳನ್ನು ಜಾರಿಗೆ ತರಲು ಮುಂದಾಗಿರುವ ಬೆನ್ನಲ್ಲೇ, ಇದೀಗ ಬ್ರಿಟನ್ ಕೂಡ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವುದು ಜಾಗತಿಕವಾಗಿ ತಂತ್ರಜ್ಞಾನ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.








