ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಎಲ್ಲಿದೆ ಎಂಬ ಆತಂಕವನ್ನು ಮೂಡಿಸುವಂತಹ ಘಟನೆಯೊಂದು ವರದಿಯಾಗಿದೆ. ಬೆಳ್ಳಂಬೆಳಗ್ಗೆಯೇ ಯುವತಿಯೊಬ್ಬಳ ಮೇಲೆ ಕಾಮುಕನೊಬ್ಬ ಹಲ್ಲೆ ನಡೆಸಿ, ಅತ್ಯಾಚಾರಕ್ಕೆ ಯತ್ನಿಸಿರುವ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಈ ಘಟನೆಯು ಸಿಲಿಕಾನ್ ಸಿಟಿಯ ಭದ್ರತೆಯ ಬಗ್ಗೆ ಮತ್ತೊಮ್ಮೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮೂಲಗಳ ಪ್ರಕಾರ, ಸಂತ್ರಸ್ತ ಯುವತಿ ಬೆಂಗಳೂರಿನ ವೈಟ್‌ಫೀಲ್ಡ್ ವ್ಯಾಪ್ತಿಯ ಪೇಯಿಂಗ್ ಗೆಸ್ಟ್ (PG) ಒಂದರಲ್ಲಿ ವಾಸವಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಾಳೆ ಎನ್ನಲಾಗಿದೆ. ಎಂದಿನಂತೆ ಘಟನೆ ನಡೆದ ದಿನದಂದು ಬೆಳಗಿನ ಜಾವ ವಿದ್ಯಾರ್ಥಿನಿ ಟೀ ಕುಡಿಯಲೆಂದು ಪಿಜಿಯಿಂದ ಹೊರಗೆ ಬಂದು, ಹತ್ತಿರದಲ್ಲೇ ಇದ್ದ ಟೀ ಅಂಗಡಿಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಳು.
ಬೆಳಗಿನ ಜಾವ ರಸ್ತೆಯಲ್ಲಿ ಜನರ ಓಡಾಟ ವಿರಳವಾಗಿದ್ದ ಸಮಯವನ್ನು ಹೊಂಚು ಹಾಕಿ ಕಾಯುತ್ತಿದ್ದ ಕಾಮುಕನೊಬ್ಬ, ಯುವತಿ ಒಂಟಿಯಾಗಿರುವುದನ್ನು ಗಮನಿಸಿದ್ದಾನೆ. ತಕ್ಷಣವೇ ಏಕಾಏಕಿ ಆಕೆಯ ಮೇಲೆ ಮುಗಿಬಿದ್ದ ಆತ, ಯುವತಿಯನ್ನು ಬಲವಂತವಾಗಿ ಎತ್ತಿಕೊಂಡು ನಿರ್ಜನ ಪ್ರದೇಶದ ಕಡೆಗೆ ಒಯ್ದು ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ಈ ಹಠಾತ್ ದಾಳಿಯಿಂದ ಯುವತಿ ತೀವ್ರ ಗಾಬರಿಗೊಂಡಿದ್ದಾಳೆ.
ಆದರೆ, ಕಂಗಾಲಾಗದೆ ಧೈರ್ಯ ಪ್ರದರ್ಶಿಸಿದ ವಿದ್ಯಾರ್ಥಿನಿ, ಆತನ ಹಿಡಿತದಿಂದ ತಪ್ಪಿಸಿಕೊಳ್ಳಲು ಜೋರಾಗಿ ಕಿರುಚಾಡಲು ಪ್ರಾರಂಭಿಸಿದ್ದಾಳೆ. ಯುವತಿಯ ಆಕ್ರಂದನ ಮತ್ತು ಕಿರುಚಾಟದ ಧ್ವನಿ ಕೇಳಿ ಎಚ್ಚೆತ್ತ ಸುತ್ತಮುತ್ತಲಿನ ಸ್ಥಳೀಯರು ಮತ್ತು ಸಾರ್ವಜನಿಕರು ತಕ್ಷಣವೇ ಧಾವಿಸಿ ಬಂದಿದ್ದಾರೆ. ಜನರು ಜಮಾಯಿಸುತ್ತಿರುವುದನ್ನು ಕಂಡು ಗಾಬರಿಗೊಂಡ ಕಾಮುಕ, ಯುವತಿಯನ್ನು ಅಲ್ಲಿಯೇ ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಈ ಘಟನೆಯಿಂದ ತೀವ್ರ ಆಘಾತಕ್ಕೊಳಗಾದ ಯುವತಿ ತಕ್ಷಣವೇ ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಕ್ಷಣವೇ ಕಾರ್ಯಾಚರಣೆಗೆ ಇಳಿದು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ‘ಸೈಬುಲ್’ ಎಂದು ಗುರುತಿಸಲಾಗಿದ್ದು, ಈತ ರಸ್ತೆ ಬದಿಯಲ್ಲಿ ಕಸ ಆಯುವ ಕೆಲಸ ಮಾಡುತ್ತಿದ್ದ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.








