ಪಟ್ನಾ: ಚಿನ್ನದ ಅಂಗಡಿಗೆ ಗ್ರಾಹಕರಂತೆ ಬಂದು, ಮಾಲೀಕನ ಕಣ್ಣಿಗೆ ಪೆಪ್ಪರ್ ಸ್ಪ್ರೇ (ಮೆಣಸಿನಕಾಯಿ ಪುಡಿ ಸ್ಪ್ರೇ) ಜಲ್ಲಿ ದರೋಡೆ ಮಾಡಲು ಯತ್ನಿಸಿದ ಇಬ್ಬರು ಯುವತಿಯರನ್ನು ಸಾರ್ವಜನಿಕರು ಸಿಕ್ಕಿಹಾಕಿಸಿ ಪೊಲೀಸರಿಗೊಪ್ಪಿಸಿದ ರೋಮಾಂಚನಕಾರಿ ಘಟನೆಯೊಂದು ಬಿಹಾರದ ಪಟ್ನಾದ ದಿಘಾ ಪ್ರದೇಶದಲ್ಲಿ ನಡೆದಿದೆ.
ಶುಕ್ರವಾರ (ಜೂನ್ 12) ಸಂಜೆ ಸುಮಾರು 5:35 ರ ಅವಧಿಯಲ್ಲಿ ಈ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ಸಿಸಿಟಿವಿ (CCTV) ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.
ಸಿನಿಮೀಯ ಶೈಲಿಯಲ್ಲಿ ಜಾಣ್ಮೆ ಪ್ರದರ್ಶಿಸಿದ ಮಾಲೀಕ!
ಆಭರಣ ಖರೀದಿಸುವ ನೆಪದಲ್ಲಿ ಅಂಗಡಿಗೆ ಬಂದ ಇಬ್ಬರು ಯುವತಿಯರು, ಮಾಲೀಕನ ಗಮನ ಬೇರೆಡೆ ಸೆಳೆದಿದ್ದಾರೆ. ಹಠಾತ್ತನೆ ಅವರಲ್ಲೊಬ್ಬಳು ತನ್ನ ಬಳಿಯಿದ್ದ ಪೆಪ್ಪರ್ ಸ್ಪ್ರೇ ತೆಗೆದು ಮಾಲೀಕನ ಮುಖಕ್ಕೆ ಹೊಡೆಯಲು ಯತ್ನಿಸಿದ್ದಾಳೆ. ಆದರೆ, ಅತ್ಯಂತ ಜಾಗರೂಕರಾಗಿದ್ದ ಜ್ಯುವೆಲ್ಲರಿ ಶಾಪ್ ಮಾಲೀಕ ಸಮಯಪ್ರಜ್ಞೆ ಮೆರೆದು ತಕ್ಷಣವೇ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ.
ಅಷ್ಟಕ್ಕೇ ನಿಲ್ಲದ ಮಾಲೀಕ, ತಕ್ಷಣವೇ ಅಂಗಡಿಯಿಂದ ಹೊರಗೆ ಓಡಿ ಬಂದು, ದರೋಡೆಗೆ ಯತ್ನಿಸಿದ ಇಬ್ಬರೂ ಯುವತಿಯರು ಹೊರಗೆ ಬರದಂತೆ ಅಂಗಡಿಯ ಶಟರ್ ಎಳೆದು ಅವರನ್ನು ಒಳಗೇ ಲಾಕ್ ಮಾಡಿದ್ದಾರೆ!
ಸಾರ್ವಜನಿಕರಿಂದ ಆರೋಪಿಗಳ ಬಂಧನ
ಅಂಗಡಿಯಿಂದ ಹೊರಬರುತ್ತಿದ್ದಂತೆ ಮಾಲೀಕ ಜೋರಾಗಿ ಕಿರುಚಾಡಿ ಸುತ್ತಮುತ್ತಲಿನವರನ್ನು ನೆರವಿಗೆ ಕರೆದಿದ್ದಾರೆ. ಕಿರುಚಾಟ ಕೇಳಿ ತಕ್ಷಣವೇ ಧಾವಿಸಿ ಬಂದ ಅಕ್ಕಪಕ್ಕದ ಅಂಗಡಿಕಾರರು ಮತ್ತು ಸಾರ್ವಜನಿಕರು ಜಂಟಿಯಾಗಿ ಇಬ್ಬರೂ ಯುವತಿಯರನ್ನು ಹಿಡಿದಿಟ್ಟುಕೊಂಡಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಯುವತಿಯರನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ. ಮಾಲೀಕನ ಸಮಯಪ್ರಜ್ಞೆಯಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು ದರೋಡೆಯಾಗುವುದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ.
📍Digha, Patna
Two girls attempted to loot a jewellery shop near Kurji bridge.
They used pepper spray in an attempt to incapacitate the shop owner.
However, he managed to move out of the shop and raise an alarm- after which, neighbouring shopkeepers gathered and the girls were… pic.twitter.com/gQpKKtS0e5
— PunsterX (@PunsterX) June 13, 2026








