ಪುಣೆ: ಪ್ರಮುಖ ಐಟಿ ದೈತ್ಯ ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಬಳಿಕ, ಈಗ ದೇಶದ ಮತ್ತೊಂದು ಪ್ರಖ್ಯಾತ ಐಟಿ ಕಂಪನಿಯಾದ ವಿಪ್ರೋ ಟೆಕ್ನಾಲಜೀಸ್ನಲ್ಲಿ (Wipro Technologies) ಧಾರ್ಮಿಕ ಕಿರುಕುಳ, ತಾರತಮ್ಯ ಹಾಗೂ ಬಲವಂತದ ಮತಾಂತರಕ್ಕೆ ಯತ್ನಿಸಿರುವ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ವಿಪ್ರೋ ಕಂಪನಿಯ ಮಾಜಿ ಮಹಿಳಾ ಉದ್ಯೋಗಿಯೊಬ್ಬರು ತಮ್ಮ ಸಹೋದ್ಯೋಗಿಯಿಂದಲೇ ತಮಗೆ ತೀವ್ರ ಧಾರ್ಮಿಕ ಕಿರುಕುಳ ಎದುರಾಗಿತ್ತು ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಬಲವಂತದ ಯತ್ನ ನಡೆದಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಹಿಂದೂ ಜನಜಾಗೃತಿ ಸಮಿತಿಯು ಪುಣೆಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸ್ವತಃ ಸಂತ್ರಸ್ತೆ ಪಾಲ್ಗೊಂಡು ತನಗಾದ ಕಹಿ ಅನುಭವಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. ತಾವು ಪುಣೆಯ ಹಿಂಜವಾಡಿ ಐಟಿ ಪಾರ್ಕ್ನಲ್ಲಿರುವ ವಿಪ್ರೋ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ಈ ದೌರ್ಜನ್ಯಗಳು ನಡೆದಿವೆ ಎಂದು ಅವರು ವಿವರಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸದ್ಯ ಪುಣೆಯ ಹಿಂಜವಾಡಿ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದರೊಂದಿಗೆ ಸಂತ್ರಸ್ತೆಯ ಪರ ವಕೀಲರು ವಿಪ್ರೋ ಕಂಪನಿಗೆ ಲೀಗಲ್ ನೋಟಿಸ್ ಜಾರಿ ಮಾಡಿದ್ದು, ಉಂಟಾಗಿರುವ ಮಾನಸಿಕ ಹಿಂಸೆಗೆ 50 ಲಕ್ಷ ರೂ. ಪರಿಹಾರ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ.
ಸಂತ್ರಸ್ತ ಮಹಿಳಾ ನೌಕರಳ ಹೇಳಿಕೆಯ ಪ್ರಕಾರ, ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ಆಕೆಯ ಸಹೋದ್ಯೋಗಿ ಮುಸ್ಲಿಂ ಮಹಿಳೆಯೊಬ್ಬಳು ನಿರಂತರವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಡ ಹೇರುತ್ತಿದ್ದಳು. ಆಕೆ ಸಂತ್ರಸ್ತೆಯ ವೈಯಕ್ತಿಕ ಜೀವನದಲ್ಲಿ ಪದೇ ಪದೇ ಹಸ್ತಕ್ಷೇಪ ಮಾಡುತ್ತಿದ್ದದ್ದಲ್ಲದೇ, ಹಿಂದೂ ಧರ್ಮವನ್ನು ತೊರೆಯುವಂತೆ ಬಲವಂತ ಮಾಡುತ್ತಿದ್ದಳು. ಅಷ್ಟೇ ಅಲ್ಲದೆ, ಇಸ್ಲಾಂ ಧರ್ಮವನ್ನು ಅಪ್ಪಿಕೊಂಡು ಮುಸ್ಲಿಂ ಪುರುಷನೊಂದಿಗೆ ದೈಹಿಕ ಅಥವಾ ವೈವಾಹಿಕ ಸಂಬಂಧವನ್ನು ಬೆಳೆಸುವಂತೆ ಆಕೆ ಸತತವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದಳು ಎಂದು ಸಂತ್ರಸ್ತೆ ಬಹಿರಂಗಪಡಿಸಿದ್ದಾರೆ.
ತಮ್ಮದೇ ಕಚೇರಿಯಲ್ಲಿ ಸುಮಾರು 10 ತಿಂಗಳ ಸುದೀರ್ಘ ಕಾಲ ಈ ಧಾರ್ಮಿಕ ಕಿರುಕುಳವನ್ನು ಸಹಿಸಿಕೊಂಡಿದ್ದಾಗಿ ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಕಂಪನಿಯ ಆಡಳಿತ ಮಂಡಳಿ ಮೂಕಪ್ರೇಕ್ಷಕನಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಇಡೀ ವಿಷಯವನ್ನು ಕಂಪನಿಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಹ, ಮತಾಂತರಕ್ಕೆ ಯತ್ನಿಸಿದ ಮುಸ್ಲಿಂ ಮಹಿಳೆಯ ವಿರುದ್ಧ ಯಾವುದೇ ಶಿಸ್ತುಕ್ರಮ ಕೈಗೊಳ್ಳಲಿಲ್ಲ. ಬದಲಾಗಿ, ಕಂಪನಿಯ ಒಂಬುಡ್ಸ್ಮನ್ ಸಮಿತಿಯಲ್ಲಿ ದೂರು ನೀಡಿದ ಸಂತ್ರಸ್ತೆ ಮಹಿಳೆಯ ವಿರುದ್ಧವೇ ಉಲ್ಟಾ ದೂರನ್ನು ದಾಖಲಿಸಿ ಸಂಚು ರೂಪಿಸಲಾಯಿತು ಎಂದು ಅವರು ಆರೋಪಿಸಿದ್ದಾರೆ.
ಕಂಪನಿಯ ಈ ಧೋರಣೆಯಿಂದಾಗಿ ಸಂತ್ರಸ್ತೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಯಿತು. ತದನಂತರ, ಆಗಸ್ಟ್ 2025 ರಲ್ಲಿ ನಡೆದ ಕಂಪನಿಯ ಸಿರೀಸ್ ಟೀಮ್ ಮೀಟಿಂಗ್ ಒಂದಕ್ಕೆ ಸಂತ್ರಸ್ತೆಯನ್ನು ಕರೆಯಿಸಿ, ಆಕೆಯ ಮೇಲೆ ತೀವ್ರ ಮಾನಸಿಕ ಒತ್ತಡ ಹೇರಿ ಬಲವಂತವಾಗಿ ರಾಜೀನಾಮೆ ಬರೆಸಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ತನ್ನ ಕಡೆಯ ವಾದ ಆಲಿಸಲು ಅಥವಾ ವಿವರಣೆಯನ್ನು ನೀಡಲು ಕಂಪನಿಯು ಯಾವುದೇ ನ್ಯಾಯಸಮ್ಮತ ಅವಕಾಶ ನೀಡಲಿಲ್ಲ ಎಂದು ಸಂತ್ರಸ್ತೆ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಈ ಪ್ರಕರಣ ಐಟಿ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಉದ್ಯೋಗಿಗಳಿಗೆ ಸುರಕ್ಷಿತ ವಾತಾವರಣ ಕಲ್ಪಿಸುವಲ್ಲಿ ಐಟಿ ಕಂಪನಿಗಳ ವೈಫಲ್ಯದ ಕುರಿತು ಚರ್ಚೆಗಳು ಆರಂಭವಾಗಿವೆ.








