ಮಧ್ಯಪ್ರದೇಶ : ಮಧ್ಯಪ್ರದೇಶದಲ್ಲಿ ಶಾಸಕರೊಬ್ಬರು ಭೀಕರ ಕಾರು ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ವರದಿಯಾಗಿದೆ. ಶಾಸಕರು ಪ್ರಯಾಣಿಸುತ್ತಿದ್ದ ಐಷಾರಾಮಿ ಎಸ್‌ಯುವಿ ಕಾರು ನಿಯಂತ್ರಣ ತಪ್ಪಿ ಶಾಲೆಯ ಗೋಡೆಗೆ ಡಿಕ್ಕಿ ಹೊಡೆದಿದ್ದು, ಅಪಘಾತದ ಬೆನ್ನಲ್ಲೇ ಕಾರಿನಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಮಧ್ಯಪ್ರದೇಶದ ಪ್ರಮುಖ ಶಾಸಕರಾದ ಯೋಗೇಂದ್ರ ಸಿಂಗ್ ಬಾಬಾ ಅವರು ಈ ಅಪಘಾತಕ್ಕೆ ಒಳಗಾದವರು. ಇತ್ತೀಚೆಗೆ ಅವರು ಜಬಲ್ಪುರದಿಂದ ತಮ್ಮ ಹುಟ್ಟೂರಾದ ಘುರ್ವಾಡಾಗೆ ಎಸ್‌ಯುವಿ ಕಾರಿನಲ್ಲಿ ಹಿಂತಿರುಗುತ್ತಿದ್ದರು. ಈ ವೇಳೆ ಸಿಯೋನಿ ಬಂಜಾರಿ ಗ್ರಾಮದ ಬಳಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಈ ದುರ್ಘಟನೆ ಸಂಭವಿಸಿದೆ.
ಹಸುವನ್ನು ತಪ್ಪಿಸಲು ಹೋಗಿ ಸಂಭವಿಸಿದ ಅವಘಡ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ವೇಗವಾಗಿ ಚಲಿಸುತ್ತಿದ್ದಾಗ ಹಠಾತ್ ಆಗಿ ಹಸುವೊಂದು ಅಡ್ಡ ಬಂದಿದೆ. ರಸ್ತೆಯಲ್ಲಿದ್ದ ಹಸುವನ್ನು ರಕ್ಷಿಸಲು ಚಾಲಕ ತಕ್ಷಣವೇ ಪ್ರಯತ್ನಿಸಿದ್ದಾನೆ. ಈ ವೇಳೆ ತೀವ್ರ ವೇಗದಲ್ಲಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯಲ್ಲಿದ್ದ ಶಾಲೆಯ ರಕ್ಷಣಾ ಗೋಡೆಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.
ಲಾಕ್ ಆದ ಬಾಗಿಲುಗಳು – ಧಗಧಗಿಸಿದ ಕಾರು: ಅಪಘಾತ ಸಂಭವಿಸಿದ ತಕ್ಷಣ ಕಾರಿನ ಆಟೋಮ್ಯಾಟಿಕ್ ಡೋರ್ (ಬಾಗಿಲು) ವ್ಯವಸ್ಥೆಯು ಸಂಪೂರ್ಣವಾಗಿ ಲಾಕ್ ಆಗಿತ್ತು. ಅದಲ್ಲದೇ, ಡಿಕ್ಕಿಯಾದ ಕೆಲವೇ ಕ್ಷಣಗಳಲ್ಲಿ ಕಾರಿನ ಇಂಜಿನ್ ಭಾಗದಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿದೆ. ಕಾರಿನೊಳಗಿದ್ದ ಶಾಸಕರು ಮತ್ತು ಸಿಬ್ಬಂದಿ ಹೊರಬರಲಾಗದೆ ತೀವ್ರ ಆತಂಕಕ್ಕೆ ಒಳಗಾಗಿದ್ದರು. ಕಾರ್ ನೋಡನೋಡುತ್ತಿದ್ದಂತೆಯೇ ಧಗಧಗನೆ ಉರಿಯಲು ಪ್ರಾರಂಭಿಸಿತು.
ಸ್ಥಳೀಯರ ಸಮಯಪ್ರಜ್ಞೆ – ದೇವರಂತೆ ಬಂದ ಜನ: ಕಾರು ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಳ್ಳುತ್ತಿರುವುದನ್ನು ಗಮನಿಸಿದ ಸಿಯೋನಿ ಬಂಜಾರಿ ಗ್ರಾಮದ ಸ್ಥಳೀಯ ನಿವಾಸಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಸಮಯಪ್ರಜ್ಞೆ ಮೆರೆದ ಗ್ರಾಮಸ್ಥರು ಕಾರಿನ ಗಾಜುಗಳನ್ನು ಒಡೆದು, ಲಾಕ್ ಆಗಿದ್ದ ಬಾಗಿಲುಗಳನ್ನು ಬಲವಂತವಾಗಿ ತೆರೆದಿದ್ದಾರೆ. ಕಾರಿನಲ್ಲಿದ್ದ ಶಾಸಕ ಯೋಗೇಂದ್ರ ಸಿಂಗ್ ಬಾಬಾ, ಅವರ ಗನ್‌ಮ್ಯಾನ್ ರಾಜು ಧ್ರುವೆ ಮತ್ತು ಕಾರು ಚಾಲಕನನ್ನು ಅತ್ಯಂತ ಜಾಣ್ಮೆಯಿಂದ ಹೊರಗೆಳೆದು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ.
ಶಾಸಕರು ಮತ್ತು ಸಿಬ್ಬಂದಿ ಕಾರಿನಿಂದ ಹೊರಬಂದ ಕೆಲವೇ ನಿಮಿಷಗಳಲ್ಲಿ ಇಡೀ ಎಸ್‌ಯುವಿ ಕಾರು ಸಂಪೂರ್ಣವಾಗಿ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ. ಅದೃಷ್ಟವಶಾತ್ ಸ್ಥಳೀಯರ ಸಮಯೋಚಿತ ನೆರವು ಮತ್ತು ದೇವರ ಕೃಪೆಯಿಂದ ಶಾಸಕರು ದೊಡ್ಡ ಗಂಡಾಂತರದಿಂದ ಪಾರಾಗಿದ್ದಾರೆ. ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.








