ರಾಯಚೂರು : ಮದುವೆಯಾಗುವುದಾಗಿ ನಂಬಿಸಿ ಪ್ರೀತಿ, ಪ್ರೇಮ, ಪ್ರಣಯ ಎಂದು ಅತ್ಯಾಚಾರ ಎಸಗಿ, ಈಗ ವಿವಾಹವಾಗುವುದಕ್ಕೆ ನಿರಾಕರಿಸಿ ಯುವಕ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬರು ಲಿಂಗಸೂಗೂರು ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಲಿಂಗಸೂಗೂರಿನ ಬಸವೇಶ್ವರ ಕಾಲೇಜಿನಲ್ಲಿ ಬಿಎಸ್‌ಸಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ 19 ವರ್ಷದ ಯುವತಿ ದೂರು ನೀಡಿದ್ದಾಳೆ. ದೇವದುರ್ಗ ತಾಲೂಕಿನ ಶಾವಂತಗಲ್ ಗ್ರಾಮದ ಶಿವಕುಮಾರ್ (22) ಯುವತಿಗೆ ವಂಚಿಸಿರುವ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿ ತನ್ನ ತಾಯಿಯ ತವರು ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಆರೋಪಿಯ ಪರಿಚಯವಾಗಿತ್ತು. ನಂತರ ಪ್ರೀತಿಯ ನೆಪದಲ್ಲಿ ಆಕೆಯನ್ನು ನಂಬಿಸಿ ಪುಸಲಾಯಿಸಿದ್ದಾನೆ. ಈಗ ಮೋಸ ಮಾಡಿರುವುದಾಗಿ ದೂರು ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 2024ರ ಅಕ್ಟೋಬರ್ 1ರಂದು ಮಧ್ಯಾಹ್ನ ಲಿಂಗಸೂಗೂರು ಸಮೀಪದ ಇಟ್ಟಿಗೆ ಕಾರ್ಖಾನೆ ಬಳಿ ಕರೆದುಕೊಂಡು ಹೋಗಿ ಯುವತಿಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಎಸಗಿದ್ದಾನೆ. ನಂತರ ಮದುವೆಯಾಗುವ ಭರವಸೆ ನೀಡಿ ದೌರ್ಜನ್ಯ ಮುಂದುವರಿಸಿದ್ದಾನೆ ಎಂದು ಪ್ರಕರಣ ದಾಖಲಾಗಿರುವ ಬಗ್ಗೆ ಪೊಲೀಸರು ಹೇಳಿದ್ದಾರೆ.
ಅಲ್ಲದೇ ಎಪ್ರಿಲ್ 22ರಂದು ಕಾಲೇಜಿನಿಂದ ಹೊರಬಂದ ಯುವತಿಯನ್ನು ಬಲವಂತವಾಗಿ ಬೈಕ್‌ನಲ್ಲಿ ಕರೆದೊಯ್ದು ಹಳೆಯ ಕ್ವಾರಿಯಲ್ಲಿ ಮತ್ತೆ ಅತ್ಯಾಚಾರ ಎಸಗಿದ್ದು, ವಿಷಯವನ್ನು ಯಾರಿಗಾದರು ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಂತ್ರಸ್ತೆಯ ದೂರಿನ ಮೇರೆಗೆ ಲಿಂಗಸೂಗೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 64(1), 352, 351(2) ಸೇರಿದಂತೆ ವಿವಿಧ ಕಲಂಗಳಡಿ ಎಫ್‌ಐಆರ್ (ಸಂಖ್ಯೆ: 141/2026) ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.








