ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯಲ್ಲಿ ಇಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸಜ್ಜಾಗುತ್ತಿದೆ. ಇಂದಿನ ಪಂದ್ಯದಲ್ಲಿ ಆರ್‌ಸಿಬಿ ತಂಡವು ಪ್ರಮುಖ ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ತಂಡದ ಪ್ರಮುಖ ಸ್ಫೋಟಕ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅನುಪಸ್ಥಿತಿಯಲ್ಲಿ ಜೇಕಬ್ ಬೆಥೆಲ್‌ಗೆ ಆರಂಭಿಕನಾಗಿ ಸಾಕಷ್ಟು ಅವಕಾಶಗಳನ್ನು ನೀಡಲಾಗಿತ್ತು. ಆದರೆ, ಬೆಥೆಲ್ ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಆರಂಭಿಕನಾಗಿ ವೆಂಕಟೇಶ್ ಅಯ್ಯರ್: ಜೇಕಬ್ ಬೆಥೆಲ್ ಸತತ ವೈಫಲ್ಯ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಆರಂಭಿಕ ವಿಭಾಗದಲ್ಲಿ ದೊಡ್ಡ ಬದಲಾವಣೆ ಮಾಡಲು ಮುಂದಾಗಿದೆ. ಕಳೆದ ಪಂದ್ಯದಲ್ಲಿ ಅತ್ಯಾಕರ್ಷಕ ಅರ್ಧಶತಕ ಸಿಡಿಸಿ ತಂಡಕ್ಕೆ ಅದ್ಭುತ ಜಯ ತಂದುಕೊಟ್ಟಿದ್ದ ಎಡಗೈ ಬ್ಯಾಟರ್ ವೆಂಕಟೇಶ್ ಅಯ್ಯರ್ ಅವರಿಗೆ ಪ್ರಮೋಷನ್ ಸಿಗುವ ಸಾಧ್ಯತೆಯಿದೆ. ಇಂದಿನ ಪಂದ್ಯದಲ್ಲಿ ಕಿಂಗ್ ವಿರಾಟ್ ಕೊಹ್ಲಿ ಜೊತೆ ವೆಂಕಟೇಶ್ ಅಯ್ಯರ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂದು ಕ್ರಿಕೆಟ್ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ.
ಬೌಲಿಂಗ್ ವಿಭಾಗಕ್ಕೆ ಜೇಕಬ್ ಡಫಿ ಎಂಟ್ರಿ: ಒಂದು ವೇಳೆ ಬ್ಯಾಟಿಂಗ್ ವಿಭಾಗದಲ್ಲಿ ಜೇಕಬ್ ಬೆಥೆಲ್ ಹೊರಗುಳಿದರೆ, ವಿದೇಶಿ ಆಟಗಾರನ ಕೋಟಾದಡಿ ನೀಳಕಾಯದ ನ್ಯೂಜಿಲೆಂಡ್ ವೇಗಿ ಜೇಕಬ್ ಡಫಿಗೆ ಮತ್ತೆ ಆರ್‌ಸಿಬಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವ ಸಾಧ್ಯತೆಯಿದೆ. ಸ್ಪಿನ್ನರ್ ಸುಯಾಶ್ ಶರ್ಮಾ ಬದಲಿಗೆ ಡಫಿ ಬೌಲಿಂಗ್ ವಿಭಾಗವನ್ನು ಬಲಪಡಿಸಲು ಮೈದಾನಕ್ಕಿಳಿಯುವ ನಿರೀಕ್ಷೆಯಿದೆ. ಇನ್ನುಳಿದಂತೆ ಅನುಭವಿ ಸ್ವಿಂಗ್ ಮಾಂತ್ರಿಕ ಭುವನೇಶ್ವರ್ ಕುಮಾರ್ ಹಾಗೂ ಆಸ್ಟ್ರೇಲಿಯಾದ ಜೋಶ್ ಹೇಜಲ್‌ವುಡ್ ತಂಡದ ವೇಗದ ದಾಳಿಯನ್ನು ಮುನ್ನಡೆಸಲಿದ್ದಾರೆ. ಇದರೊಂದಿಗೆ ಇಂಪ್ಯಾಕ್ಟ್ ಆಟಗಾರನಾಗಿ ರಸಿಕ್ ಸಲಂ ಧರ್ ತಂಡವನ್ನು ಕೂಡಿಕೊಳ್ಳಲಿದ್ದಾರೆ.
ನಾಯಕ ರಜತ್ ಪಾಟೀದಾರ್ ಕಮ್‌ಬ್ಯಾಕ್: ಕಳೆದ ಪಂದ್ಯದಲ್ಲಿ ಫಿಟ್ನೆಸ್ ಸಮಸ್ಯೆಯಿಂದಾಗಿ ತಂಡದಿಂದ ದೂರ ಉಳಿದಿದ್ದ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಪ್ರಸ್ತುತ ಸಂಪೂರ್ಣ ಫಿಟ್ ಆಗಿದ್ದು, ಇಂದಿನ ಪಂದ್ಯದ ಮೂಲಕ ತಂಡಕ್ಕೆ ಅದ್ಧೂರಿ ಕಮ್‌ಬ್ಯಾಕ್ ಮಾಡಲು ರೆಡಿಯಾಗಿದ್ದಾರೆ. ನಾಯಕನ ಬರುವಿಕೆಯಿಂದ ಮಧ್ಯಮ ಕ್ರಮಾಂಕಕ್ಕೆ ಮತ್ತಷ್ಟು ಆನೆಬಲ ಬಂದಂತಾಗಿದೆ. ಕರಾರುವಾಕ್ ಬ್ಯಾಟಿಂಗ್ ಮೂಲಕ ರನ್ ಮಳೆ ಹರಿಸಲು ದೇವದತ್ ಪಡಿಕ್ಕಲ್, ನಾಯಕ ರಜತ್ ಪಾಟೀದಾರ್, ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಹಾಗೂ ಮ್ಯಾಚ್ ಫಿನಿಶರ್ ಟಿಮ್ ಡೇವಿಡ್ ಮಧ್ಯಮ ಕ್ರಮಾಂಕದಲ್ಲಿ ಸಜ್ಜಾಗಿದ್ದಾರೆ.
ಸ್ಟಾರ್ ಆಲ್ರೌಂಡರ್‌ಗಳ ಬಲ: ಆರ್‌ಸಿಬಿ ತಂಡಕ್ಕೆ ಕೃನಾಲ್ ಪಾಂಡ್ಯ ಹಾಗೂ ರೊಮ್ಯಾರಿಯೋ ಶೆಫರ್ಡ್ ರೂಪದಲ್ಲಿ ಇಬ್ಬರು ವಿಶ್ವದರ್ಜೆಯ ಸ್ಟಾರ್ ಆಲ್ರೌಂಡರ್‌ಗಳ ಬಲವಿದೆ. ಈ ಇಬ್ಬರೂ ಆಟಗಾರರು ಕೇವಲ ಬೌಲಿಂಗ್‌ನಲ್ಲಿ ಮಾತ್ರವಲ್ಲದೆ, ಕಠಿಣ ಪರಿಸ್ಥಿತಿಯಲ್ಲಿ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಆಸರೆಯಾಗಬಲ್ಲ ಅದ್ಭುತ ಕ್ಷಮತೆ ಹೊಂದಿದ್ದಾರೆ. ಒಟ್ಟಾರೆಯಾಗಿ, ಇಂದಿನ ಪಂದ್ಯದಲ್ಲಿ ಹೊಸ ತಂತ್ರಗಾರಿಕೆ ಹಾಗೂ ಪ್ರಮುಖ ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿರುವ ಆರ್‌ಸಿಬಿ ಮತ್ತೊಂದು ಭರ್ಜರಿ ಗೆಲುವಿನ ಮೇಲೆ ಕಣ್ಣಿಟ್ಟಿದೆ.








