ನವದೆಹಲಿ : ಸದ್ಯ ಭಾರತದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಕಾಕ್ರೋಚ್ ಜನತಾ ಪಾರ್ಟಿ, ಜೆನ್ Z ಯುವಕರನ್ನು ಆಕರ್ಷಿಸುತ್ತಿದೆ. ಆದರೆ, ಈ ಪಕ್ಷಕ್ಕೆ ಸೇರಲು ಕಳುಹಿಸಲಾಗುವ ವಾಟ್ಸ್ಆ್ಯಪ್ ಲಿಂಕ್‌ಗಳ ಮೂಲಕ ಸೈಬರ್ ವಂಚಕರು ಬ್ಯಾಂಕ್ ಖಾತೆಗಳನ್ನು ಲೂಟಿ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದ್ದು, ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಸೂಚಿಸಿದೆ.
ಹೌದು ಜನರನ್ನು ಮರುಳು ಮಾಡಲು, ಅವರ ಬ್ಯಾಂಕ್ ಖಾತೆಯನ್ನು ಲೂಟಿ ಮಾಡಲು ಹೊಸ ಹೊಸ ಪ್ರಯೋಗ ಮಾಡುತ್ತಲೇ ಬಂದಿದೆ. ಸೋ ಕಾಲ್ಡ್ ವೆಲ್ ಎಜುಕೇಟೆಡ್ ಅರ್ಥಾತ್ ಸುಶಿಕ್ಷಿತರು ಎನ್ನಿಸಿಕೊಂಡಿರುವ ಜನರೇ ಇವರ ಮೋಸಕ್ಕೆ ಬಲಿಯಾಗಿ ಲಕ್ಷ ಲಕ್ಷ ಕಳೆದುಕೊಳ್ಳುತ್ತಿದ್ದಾರೆ. ಪೊಲೀಸರು, ಮಾಧ್ಯಮಗಳಲ್ಲಿ ಎಷ್ಟೇ ಎಚ್ಚರಿಕೆ ಬಂದರೂ, ತಮಗೆ ಆಮಿಷ ತೋರಿ ಬಂದಿರುವ ಲಿಂಕ್ ನೋಡಿದ ತಕ್ಷಣ ಎಲ್ಲಾ ಎಚ್ಚರಿಕೆಯೂ ಮರೆತು ಹೋಗಿ ಲಿಂಕ್ ಕ್ಲಿಕ್ ಮಾಡಿ ದುಡ್ಡು ಕಳೆದುಕೊಂಡಿರುವವರೇ ಲಕ್ಷ ಲಕ್ಷ ಮಂದಿ ಇದ್ದಾರೆ. ಹೀಗೆ ಕಳೆದುಕೊಂಡ ದುಡ್ಡು ಸಿಗುವುದು ಕೂಡ ಅತ್ಯಂತ ವಿರಳ. ಏಕೆಂದರೆ ಸೈಬರ್ ಕ್ರಿಮಿನಲ್ಸ್ ನೆಟ್ವರ್ಕ್ ಅಷ್ಟೊಂದು ಸ್ಟ್ರಾಂಗ್ ಆಗಿದೆ.
ಕಾಕ್ರೋಚ್ ಜನತಾ ಪಕ್ಷಕ್ಕೆ ನೀವೂ ಜಾಯಿನ್ ಆಗಿ ಎಂದು ನಿಮ್ಮ ವಾಟ್ಸ್ಆ್ಯಪ್ಗೆ ಲಿಂಕ್ ಬರುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಇದರ ಹವಾ ನೋಡಿ ನೀವೂ ಭಾರತವನ್ನು ಬದಲಾಯಿಸಿಯೇ ಬಿಡೋಣ, ನಾನೂ ಈ ಪಕ್ಷವನ್ನು ಜಾಯಿನ್ ಆಗೋಣ ಎಂದು ಹಿಂದೆ ಮುಂದೆ ನೋಡದೇ ಲಿಂಕ್ ಕ್ಲಿಕ್ ಮಾಡಿದರೆ ನಿಮಗೆ ಅರಿವೇ ಇಲ್ಲದೇ, ನಿಮ್ಮ ಅಕೌಂಟ್ ಹ್ಯಾಕ್ ಆಗಿರುತ್ತದೆ. ಬ್ಯಾಂಕ್ ಲೂಟಿಯಾಗಿರುತ್ತದೆ. ಇದಾಗಲೇ ಕೆಲವು ಕೇಸ್ಗಳು ಹೀಗೆಯೇ ಆಗಿದ್ದು, ತಮ್ಮ ಬ್ಯಾಂಕ್ನಲ್ಲಿ ಏನಾಗ್ತಿದೆ ಎನ್ನುವುದೇ ತಿಳಿಯದೇ ಜೆನ್ ಜೀಗಳು ಕಂಗಾಲಾಗಿರುವುದಾಗಿ ಈ ಪೊಲೀಸ್ ಅಧಿಕಾರಿ ಎಚ್ಚರಿಸಿದ್ದಾರೆ ನೋಡಿ.








