ಬೆಂಗಳೂರು: ನೈಋತ್ಯ ರೈಲ್ವೆ ಇಲಾಖೆಯು ತನ್ನ ಹಠಮಾರಿತನವನ್ನು ಮುಂದುವರೆಸಿದೆ. ಕನ್ನಡಿಗರ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ಈ ಹಿಂದೆ ರದ್ದುಗೊಳಿಸಲಾಗಿದ್ದ ಪದೋನ್ನತಿ (ಪ್ರಮೋಷನ್) ಪರೀಕ್ಷೆಗೆ ಇದೀಗ ಮತ್ತೆ ದಿನಾಂಕ ನಿಗದಿಪಡಿಸಲಾಗಿದ್ದು, ಈ ಬಾರಿಯೂ ಸಹ ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ರೈಲ್ವೆ ಇಲಾಖೆಯ ಈ ಕ್ರಮವು ಕನ್ನಡಪರ ಸಂಘಟನೆಗಳ ತೀವ್ರ ಕೆಂಗಣ್ಣಿಗೆ ಗುರಿಯಾಗಿದೆ.
ಜೂನ್ 25ಕ್ಕೆ ಪರೀಕ್ಷೆ ನಿಗದಿ: ಪ್ರಶ್ನೆಪತ್ರಿಕೆ ಕೇವಲ ಇಂಗ್ಲಿಷ್, ಹಿಂದಿಯಲ್ಲಿ ಮಾತ್ರ!
ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಜೂನ್ 4ರಂದು ಹೊರಡಿಸಿರುವ ಹೊಸ ಅಧಿಸೂಚನೆಯ ಪ್ರಕಾರ, ಗೂಡ್ಸ್ ಟ್ರೇನ್ ಮ್ಯಾನೇಜರ್ ಹುದ್ದೆ (ಲೆವೆಲ್-5) ಸೇರಿದಂತೆ ಒಟ್ಟು 73 ಬಡ್ತಿ ಹುದ್ದೆಗಳಿಗಾಗಿ ಜೂನ್ 25ರಂದು ಕಂಪ್ಯೂಟರ್ ಆಧಾರಿತ (CBT) ಪದೋನ್ನತಿ ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಲಾಗಿದೆ.
ಯಾವ ಯಾವ ಹುದ್ದೆಗಳಿಗೆ ಪರೀಕ್ಷೆ?
ಆಫೀಸ್ ಸೂಪರಿಂಟೆಂಡೆಂಟ್: 39 ಪೋಸ್ಟ್
ಸೀನಿಯರ್ ಕ್ಲರ್ಕ್: 25 ಪೋಸ್ಟ್
ಇಂಟರ್ಮೀಡಿಯೆಟ್ ಅಪ್ರೆಂಟಿಸ್ ಮೆಕ್ಯಾನಿಕ್ಸ್: 09 ಪೋಸ್ಟ್
ಆದರೆ, ಈ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ಸಿದ್ಧಪಡಿಸಲಾಗುತ್ತಿದ್ದು, ಕನ್ನಡಿಗರಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಯಾವುದೇ ಅವಕಾಶ ನೀಡಿಲ್ಲ.
ಕಳೆದ ಬಾರಿ ಇದೇ ಪರೀಕ್ಷೆಯನ್ನು ಕೇವಲ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ನಡೆಸಲು ಮುಂದಾಗಿದ್ದಾಗ, ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಬೆಂಗಳೂರು, ಹುಬ್ಬಳ್ಳಿ ಹಾಗೂ ಮೈಸೂರಿನ ಪರೀಕ್ಷಾ ಕೇಂದ್ರಗಳಿಗೆ ನುಗ್ಗಿ ತೀವ್ರ ಪ್ರತಿಭಟನೆ ನಡೆಸಿದ್ದರು. ಕನ್ನಡಿಗರ ಈ ಖಡಕ್ ಎಚ್ಚರಿಕೆಗೆ ಮಣಿದಿದ್ದ ರೈಲ್ವೆ ಇಲಾಖೆ ದಿಢೀರ್ ಆಗಿ ಪರೀಕ್ಷೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಆದರೆ ಈಗ ಯಾವುದೇ ಬದಲಾವಣೆ ಮಾಡಿಕೊಳ್ಳದೆ, ಮತ್ತೊಮ್ಮೆ ಕನ್ನಡವನ್ನು ಕಡೆಗಣಿಸಿ ಹೊಸ ದಿನಾಂಕ ಪ್ರಕಟಿಸಿರುವುದು ಕನ್ನಡಿಗರ ಭಾಷಾ ಹಕ್ಕುಗಳನ್ನು ಕಿತ್ತುಕೊಳ್ಳುವ ದೊಡ್ಡ ಸಂಚಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.








