ಬೆಂಗಳೂರು :ಬೆಂಗಳೂರಿನಲ್ಲಿ ಮನೆಗಳನ್ನು ಲೀಸ್ ಆಧಾರದ ಮೇಲೆ ಪಡೆಯಲು ಬಯಸುವವರನ್ನೇ ಗುರಿಯಾಗಿಸಿಕೊಂಡು ಬರೋಬ್ಬರಿ 200 ಕೋಟಿ ರೂಪಾಯಿಗೂ ಅಧಿಕ ಹಣ ವಂಚಿಸಿರುವ ಬೃಹತ್ ಜಾಲವೊಂದು ಬೆಳಕಿಗೆ ಬಂದಿದೆ. ಸಿಲಿಕಾನ್ ಸಿಟಿಯಲ್ಲಿ ಭೋಗ್ಯಕ್ಕೆ (ಲೀಸ್) ಮನೆಗಳ ತೀವ್ರ ಕೊರತೆ ಇರುವುದನ್ನೇ ಬಂಡವಾಳ ಮಾಡಿಕೊಂಡ ‘ಜಾನ್ಸ್ ಅಸೆಟ್’ (John’s Asset) ಹೆಸರಿನ ಮಧ್ಯವರ್ತಿ ಕಂಪನಿಯು 300ಕ್ಕೂ ಹೆಚ್ಚು ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದೆ. ಸದ್ಯ ಕಂಪನಿಯ ಮಾಲೀಕ ಸ್ಟೀಫನ್ ಜಾನ್ ಸಾರ್ವಜನಿಕರ ಹಣದೊಂದಿಗೆ ತಲೆಮರೆಸಿಕೊಂಡಿದ್ದಾನೆ.
ಈ ಕಂಪನಿಯು ಗ್ರಾಹಕರನ್ನು ಸೆಳೆಯಲು ಒಂದು ವಿಭಿನ್ನ ಹಾಗೂ ಆಕರ್ಷಕ ತಂತ್ರವನ್ನು ಬಳಸಿತ್ತು. ಗ್ರಾಹಕರು ಲೀಸ್ ಹಣವನ್ನು ತಮ್ಮ ಕಂಪನಿಯಲ್ಲಿ ಹೂಡಿಕೆ ಮಾಡಿದರೆ, ತಾವೇ ಸೂಕ್ತವಾದ ಮನೆಗಳನ್ನು ಹುಡುಕಿ ಕೊಡುವುದಾಗಿ ನಂಬಿಸಿತ್ತು. ಅಷ್ಟೇ ಅಲ್ಲದೆ, ಆ ಮನೆಗಳ ಮಾಸಿಕ ಬಾಡಿಗೆಯನ್ನು ಕಂಪನಿಯೇ ಪಾವತಿಸುವುದಾಗಿ ಭರವಸೆ ನೀಡಿತ್ತು. ಇದರಿಂದ ಸಾರ್ವಜನಿಕರು ತಂಗಲು ಮನೆಯೂ ಸಿಗುತ್ತದೆ, ಜೊತೆಗೆ ಲೀಸ್ ಹಣವೂ ಕಂಪನಿಯಲ್ಲಿ ಸುರಕ್ಷಿತವಾಗಿ ಹೂಡಿಕೆಯಾಗುತ್ತದೆ ಎಂದು ನಂಬಿ ಒಬ್ಬೊಬ್ಬರು ತಲಾ 10 ಲಕ್ಷದಿಂದ ಹಿಡಿದು 75 ಲಕ್ಷ ರೂಪಾಯಿವರೆಗೆ ಹಣ ಹೂಡಿಕೆ ಮಾಡಿದ್ದರು.
ಆರಂಭದಲ್ಲಿ ಕಂಪನಿಯು ವ್ಯವಸ್ಥಿತವಾಗಿ ಕೆಲವು ತಿಂಗಳುಗಳ ಕಾಲ ಮನೆ ಮಾಲೀಕರಿಗೆ ಬಾಡಿಗೆ ಪಾವತಿಸಿ ನಂಬಿಕೆ ಗಳಿಸಿತ್ತು. ಆದರೆ ದಿನ ಕಳೆದಂತೆ ಬಾಡಿಗೆ ಪಾವತಿಸದೆ ಗ್ರಾಹಕರಿಗೆ ಮತ್ತು ಮನೆ ಮಾಲೀಕರಿಗೆ ಕಳ್ಳಾಟವಾಡಲು ಶುರು ಮಾಡಿದೆ. ಈ ಕುರಿತು ಸಂತ್ರಸ್ತರಾದ ಗಾಯತ್ರಿ ಎಂಬುವವರು ಪ್ರತಿಕ್ರಿಯಿಸಿ, “ನಾವು ಕಂಪನಿಗೆ 37 ಲಕ್ಷ ರೂ. ನೀಡಿದ್ದೆವು. ಆದರೆ ಅವರು ಮನೆ ಬಾಡಿಗೆ ಪಾವತಿಸಿರಲಿಲ್ಲ. ಮಾಲೀಕರು ಮನೆ ಖಾಲಿ ಮಾಡಲು ಹೇಳಿದಾಗ ನಾವು ಹಣ ವಾಪಸ್ ಕೇಳಲು ಹೋಗಿದ್ದೆವು. ಆ ವೇಳೆ ಹಣ ನೀಡದ ಕಂಪನಿಯು, ಅದೇ ಮೊತ್ತಕ್ಕೆ ತಿಂಗಳಿಗೆ ಶೇ. 4ರಷ್ಟು ಬಡ್ಡಿ ನೀಡುವುದಾಗಿ ನಂಬಿಸಿತು. ಅದನ್ನು ನಂಬಿದ ನಮಗೆ ಕೇವಲ ಎರಡು ತಿಂಗಳು ಮಾತ್ರ ಹಣ ನೀಡಿ ನಂತರ ವಂಚಿಸಿದೆ” ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ವಿಚಾರಣೆ ವೇಳೆ ಈ ಕಂಪನಿಯು ಹಳೆಯ ಗ್ರಾಹಕರಿಗೆ ಹಣ ಪಾವತಿಸಲು ಹೊಸ ಗ್ರಾಹಕರಿಂದ ಬಂದ ಹಣವನ್ನು ಬಳಸಿಕೊಳ್ಳುತ್ತಾ ಸದ್ದಿಲ್ಲದೆ ‘ಪೋಂಜಿ ಸ್ಕೀಮ್’ ಮಾದರಿಯಲ್ಲಿ ದಂಧೆ ನಡೆಸುತ್ತಿತ್ತು ಎಂಬ ಆಘಾತಕಾರಿ ವಿಷಯ ತಿಳಿದುಬಂದಿದೆ. ಪ್ರಸ್ತುತ ಕಂಪನಿಗೆ ಬೀಗ ಜಡಿದು ಮಾಲೀಕ ಸ್ಟೀಫನ್ ಜಾನ್ ಕೋಟ್ಯಂತರ ರೂಪಾಯಿ ಹಣದೊಂದಿಗೆ ಪರಾರಿಯಾಗಿದ್ದಾನೆ. ಇನ್ನು ಗಮನಿಸಬೇಕಾದ ಅಂಶವೆಂದರೆ, ಇದೇ ಆರೋಪಿ ಈ ಹಿಂದೆ ಕೂಡ ಇಂತಹದೇ ವಂಚನೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧಿತನಾಗಿದ್ದ ಎನ್ನಲಾಗಿದೆ. ಸದ್ಯ ಹಣ ಕಳೆದುಕೊಂಡು ಕಂಗಾಲಾಗಿರುವ ನೂರಾರು ಸಂತ್ರಸ್ತರು ಇಂದಿರಾನಗರ ಪೊಲೀಸ್ ಠಾಣೆಗೆ ಧಾವಿಸಿ ನ್ಯಾಯಕ್ಕಾಗಿ ದೂರು ನೀಡಿದ್ದಾರೆ.








