ಲಖಿಂಪುರ ಖೇರಿ (ಉತ್ತರ ಪ್ರದೇಶ): ಇಲ್ಲಿನ ಸಿಸೈಯಾ-ಲಖಿಂಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ವ್ಯಾನ್ ಮತ್ತು ಟ್ರಕ್ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ಹತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಖಿಂಪುರದಿಂದ ಸಿಸೈಯಾ ಕಡೆಗೆ ಪ್ರಯಾಣಿಸುತ್ತಿದ್ದ ವ್ಯಾನ್, ಉಂಚ್ಗಾಂವ್ ಮತ್ತು ಭರೇಹ್ರಾ ಗ್ರಾಮಗಳ ನಡುವೆ ಅಪಘಾತಕ್ಕೆ ಈಡಾಗಿದೆ. ವ್ಯಾನ್ನಲ್ಲಿದ್ದ ಒಂಬತ್ತು ಪ್ರಯಾಣಿಕರು ಹಾಗೂ ಚಾಲಕ ಸೇರಿದಂತೆ ಒಟ್ಟು 10 ಜನರು ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಧೌರಹ್ರಾ ವೃತ್ತದ ಪೊಲೀಸ್ ಅಧಿಕಾರಿ ಶಂಶೇರ್ ಬಹದ್ದೂರ್ ಸಿಂಗ್ ತಿಳಿಸಿದ್ದಾರೆ.
ಲಖಿಂಪುರ ಖೇರಿ ಜಿಲ್ಲಾಧಿಕಾರಿ ಅಂಜನಿ ಕುಮಾರ್ ಸಿಂಗ್ ಮಾತನಾಡಿ, “ಒಂಬತ್ತು ಜನರು ಅಪಘಾತದ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತೊಬ್ಬರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.
ಮೃತರ ಗುರುತು ಪತ್ತೆ:
ಮೃತರಲ್ಲಿ ಏಳು ಜನರನ್ನು ಗುರುತಿಸಲಾಗಿದ್ದು, ಬಹರೈಚ್ ಜಿಲ್ಲೆಯ ನಿವಾಸಿಗಳಾದ ಜೈದೀಪ್ ಸಿಂಗ್ (25), ಪವನ್ (23), ಸೋಹನ್ (21), ರಾಮ್ ಗೋಯಲ್ (42), ಸಹಜ್ರಾಮ್ (35), ಪಪ್ಪು (18) ಮತ್ತು ಲಖಿಂಪುರ ಖೇರಿ ಜಿಲ್ಲೆಯ ಅದ್ನಾನ್ ಖಾನ್ (15) ಎಂದು ಗುರುತಿಸಲಾಗಿದೆ. ಉಳಿದ ಮೃತರ ಗುರುತು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಸಂತಾಪ ಮತ್ತು ಪರಿಹಾರ ಘೋಷಣೆ:
ಭೀಕರ ರಸ್ತೆ ಅಪಘಾತದಲ್ಲಿ ಸಂಭವಿಸಿದ ಜೀವಹಾನಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಕಳವಳ ಮತ್ತು ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪ್ರಧಾನ ಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ ತಲಾ 50,000 ರೂಪಾಯಿಗಳ ಪರಿಹಾರವನ್ನು ಘೋಷಿಸಿದ್ದಾರೆ.
ಈ ಕುರಿತು ‘X’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಸಂಭವಿಸಿದ ಅಪಘಾತದ ಸುದ್ದಿ ಕೇಳಿ ತೀವ್ರ ಕಷ್ಟವಾಗಿದೆ. ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರ ಗುಣಮುಖರಾಗಲಿ. ಮೃತರ ಕುಟುಂಬಕ್ಕೆ PMNRF ನಿಂದ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50,000 ರೂ.ಗಳ ಎಕ್ಸ್-ಗ್ರೇಷಿಯಾ ನೀಡಲಾಗುವುದು” ಎಂದು ಬರೆದುಕೊಂಡಿದ್ದಾರೆ.
PM Narendra Modi-"An ex-gratia of Rs. 2 lakh from PMNRF would be given to the next of kin of each deceased. The injured would be given Rs. 50,000." pic.twitter.com/G2JU4RhZHm
— ANI (@ANI) May 18, 2026
#WATCH | Uttar Pradesh | Lakhimpur Kheri DM Anjani Kumar Singh and SSP Khyati Garg reach the accident spot where 10 people died after a collision between a truck and a van https://t.co/rOnMU3MfQN pic.twitter.com/R9AMMjFqRB
— ANI (@ANI) May 18, 2026








