ಚಂಡೀಗಢ: ಆಂಧ್ರಪ್ರದೇಶ ಸರ್ಕಾರ ಇತ್ತೀಚೆಗೆ ಮೂರನೇ ಮತ್ತು ನಾಲ್ಕನೇ ಮಗುವಿಗೆ ನಗದು ಪ್ರೋತ್ಸಾಹಧನ ಘೋಷಿಸಿದ ಮಾದರಿಯಲ್ಲೇ, ಪಂಜಾಬ್ನ ಯುವ ಸಿಖ್ ದಂಪತಿಗಳಿಗೂ ಆರ್ಥಿಕ ಪ್ರೋತ್ಸಾಹಧನವನ್ನು ಪರಿಚಯಿಸುವಂತೆ ಕೋರಿ ಪಂಜಾಬ್ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಜಗಮೋಹನ್ ಸಿಂಗ್ ರಾಜು ಅವರು ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಪತ್ರ ಬರೆದಿದ್ದಾರೆ.
ಪಂಜಾಬ್ನಲ್ಲಿರುವ ಪ್ರತಿ ಸಿಖ್ ಕುಟುಂಬಕ್ಕೂ ನಾಲ್ಕು ಮಕ್ಕಳಿರಬೇಕು” ಎಂದು ರಾಜು ಹೇಳಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಬರೆದಿರುವ ಪತ್ರದಲ್ಲಿ ಡಾ. ಜಗಮೋಹನ್ ಸಿಂಗ್ ರಾಜು, “ಸಿಖ್ ಸಮುದಾಯವು ಭಾರತದಲ್ಲಿ ಸಾಂವಿಧಾನಿಕವಾಗಿ ಗುರುತಿಸಲ್ಪಟ್ಟಿರುವ ಅಲ್ಪಸಂಖ್ಯಾತ ಸಮುದಾಯವಾಗಿದೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ದತ್ತಾಂಶಗಳ ಪ್ರಕಾರ, ದೇಶದ ಪ್ರಮುಖ ಸಮುದಾಯಗಳ ಪೈಕಿ ಸಿಖ್ಖರ ಫಲವತ್ತತೆ ದರ (Fertility rate) ಅತ್ಯಂತ ಕಡಿಮೆಯಿದೆ. ಇದರ ಪರಿಣಾಮವಾಗಿ, ಸಿಖ್ ಜನಸಂಖ್ಯೆಯು ನಿರಂತರವಾಗಿ ಕುಸಿಯುತ್ತಿದೆ. ಪಂಜಾಬ್ನ ಒಟ್ಟು ಜನಸಂಖ್ಯೆಯಲ್ಲಿ ಸಿಖ್ಖರ ಪಾಲು 1991 ರ ಜನಗಣತಿಯಲ್ಲಿ ಶೇ. 62.95 ರಷ್ಟಿದ್ದುದು, 2011 ರ ಜನಗಣತಿಯ ವೇಳೆಗೆ ಶೇ. 57.69 ಕ್ಕೆ ಇಳಿಕೆಯಾಗಿದೆ ಎಂಬುದು ಕಳವಳಕಾರಿ ಸಂಗತಿಯಾಗಿದೆ. ಸದ್ಯದ ಸೂಚನೆಗಳ ಪ್ರಕಾರ ಈ ಪ್ರವೃತ್ತಿ ಈಗಲೂ ಮುಂದುವರಿದಿದೆ” ಎಂದು ಉಲ್ಲೇಖಿಸಿದ್ದಾರೆ.
ಈ ನೀತಿಯನ್ನು ತಕ್ಷಣವೇ ಜಾರಿಗೆ ತರಬೇಕಾದ ಅಗತ್ಯವನ್ನು ಒತ್ತುಿ ಹೇಳಿರುವ ಅವರು, “ಈ ಜನಸಂಖ್ಯಾ ಕುಸಿತವು ಪಂಜಾಬ್ನಲ್ಲಿರುವ ಸಿಖ್ ಸಮುದಾಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ಭವಿಷ್ಯದ ದೃಷ್ಟಿಯಿಂದ ಗಂಭೀರ ಕಳವಳದ ವಿಷಯವಾಗಿದೆ” ಎಂದು ತಿಳಿಸಿದ್ದಾರೆ.








