ದೊಡ್ಡಬಳ್ಳಾಪುರ: ಮನೆಯಲ್ಲಿ ಫ್ರಿಡ್ಜ್ ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿದ (ವಿದ್ಯುತ್ ಶಾಕ್) ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದಲ್ಲಿ ನಡೆದಿದೆ.
ದೊಡ್ಡಬಳ್ಳಾಪುರದ ಚೈತನ್ಯನಗರದ ನಿವಾಸಿಯಾದ ಮೀನಾಕ್ಷಿ (35) ಮೃತಪಟ್ಟ ದುರ್ದೈವಿ ಮಹಿಳೆಯಾಗಿದ್ದಾರೆ.
ಪ್ರಜ್ಞೆ ತಪ್ಪಿ ಬಿದ್ದಿದ್ದ ಮಹಿಳೆ
ಮೃತ ಮೀನಾಕ್ಷಿ ಅವರು ಎಂದಿನಂತೆ ತಮ್ಮ ಮನೆಯಲ್ಲಿ ಫ್ರಿಡ್ಜ್ ಕ್ಲೀನ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಫ್ರಿಡ್ಜ್‌ನಿಂದ ಇದ್ದಕ್ಕಿದ್ದಂತೆ ವಿದ್ಯುತ್ ಪ್ರವಹಿಸಿದೆ. ವಿದ್ಯುತ್ ಶಾಕ್ ತಗುಲಿದ ಭೀಕರತೆಗೆ ಮೀನಾಕ್ಷಿ ಅವರು ಪ್ರಜ್ಞೆ ತಪ್ಪಿ ತಕ್ಷಣವೇ ನೆಲಕ್ಕೆ ಬಿದ್ದಿದ್ದಾರೆ.
ಚಿಕಿತ್ಸೆ ಫಲಕಾರಿಯಾಗದೆ ಸಾವು
ಘಟನೆ ಬೆಳಕಿಗೆ ಬರುತ್ತಿದ್ದಂತೆ ಕುಟುಂಬಸ್ಥರು ಹಾಗೂ ಸ್ಥಳೀಯರು ತಕ್ಷಣವೇ ಮೀನಾಕ್ಷಿ ಅವರನ್ನು ರಕ್ಷಿಸಿ, ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ತೀವ್ರವಾಗಿ ಅಸ್ವಸ್ಥರಾಗಿದ್ದ ಮೀನಾಕ್ಷಿ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಈ ದುರಂತ ಘಟನೆಯು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಹಾಗೂ ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಒಮ್ಮೆಗೆ ಸಂಭವಿಸಿದ ಈ ಘಟನೆಯಿಂದ ಚೈತನ್ಯನಗರದ ನಿವಾಸಿಗಳು ಹಾಗೂ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ದೇಶದಲ್ಲಿ ಶೇ. 35 ರಿಂದ 40 ರಷ್ಟು ವಕೀಲರು ನಕಲಿ: ಬಾರ್ ಕೌನ್ಸಿಲ್ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಆಘಾತಕಾರಿ ಹೇಳಿಕೆ
ಬೆಂಗಳೂರಿನಿಂದ ಜೂನ್.1ರಿಂದ ಬೀದರ್, 10ರಿಂದ ಕಲಬುರ್ಗಿಗೆ ವಿಮಾನ ಸೇವೆ ಆರಂಭ








