ಧರ್ಮಶಾಲಾ:ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಅಂಪೈರ್ ಅವರ ತಪ್ಪು ನಿರ್ಧಾರದಿಂದಾಗಿ ಒಂದು ರನ್ ನಷ್ಟವಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣ ‘X’ ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಐಸಿಸಿ (ICC) ನಿಯಮ ಬದಲಿಸುವವರೆಗೂ ಕಾಯದೆ ಐಪಿಎಲ್ ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪಂಜಾಬ್ ಇನಿಂಗ್ಸ್‌ನ ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ಈ ಡ್ರಾಮಾ ನಡೆಯಿತು. ಜಸ್ಪ್ರೀತ್ ಬುಮ್ರಾ ಎಸೆದ ಚೆಂಡು ಬ್ಯಾಟರ್ ವಿಷ್ಣು ವಿನೋದ್ ಅವರ ಪ್ಯಾಡ್‌ಗೆ ಬಡಿಯಿತು. ಮುಂಬೈ ಆಟಗಾರರ ಮನವಿಗೆ ಸ್ಪಂದಿಸಿದ ಅಂಪೈರ್ ತಕ್ಷಣವೇ ‘ಔಟ್’ ಎಂದು ತೀರ್ಪು ನೀಡಿದರು. ಆದರೆ, ಬ್ಯಾಟರ್ ತಕ್ಷಣವೇ ರಿವ್ಯೂ ಪಡೆದರು. ಚೆಂಡು ಲೆಗ್ ಸ್ಟಂಪ್‌ನಿಂದ ಹೊರಗಡೆ ಹೋಗುತ್ತಿರುವುದು ರಿಪ್ಲೇನಲ್ಲಿ ಸ್ಪಷ್ಟವಾಗಿ ಕಂಡಿದ್ದರಿಂದ ಅಂಪೈರ್ ತಮ್ಮ ತೀರ್ಪನ್ನು ಬದಲಿಸಬೇಕಾಯಿತು.
ಆದರೆ, ಅಸಲಿ ಸಮಸ್ಯೆ ಇಲ್ಲಿ ಶುರುವಾಯಿತು. ಅಂಪೈರ್ ಔಟ್ ಎಂದು ಬೆರಳು ಎತ್ತಿದ ಕೂಡಲೇ ನಿಯಮದ ಪ್ರಕಾರ ಚೆಂಡು ‘ಡೆಡ್’ (Dead Ball) ಎಂದು ಪರಿಗಣಿಸಲ್ಪಡುತ್ತದೆ. ಅಂಪೈರ್ ತೀರ್ಪು ನೀಡುವ ಮೊದಲೇ ಬ್ಯಾಟರ್‌ಗಳು ಒಂದು ರನ್ ಓಡಿ ಪೂರೈಸಿದ್ದರೂ, ನಿಯಮದ ಪ್ರಕಾರ ಆ ರನ್ ಅನ್ನು ಪಂಜಾಬ್ ತಂಡದ ಖಾತೆಗೆ ಸೇರಿಸಲು ಸಾಧ್ಯವಾಗಲಿಲ್ಲ.
ಈ ಬಗ್ಗೆ ಕಿಡಿಕಾರಿದ ಅಶ್ವಿನ್, “ಅಂಪೈರ್ ಅವರ ತಪ್ಪು ನಿರ್ಧಾರದಿಂದ ಪಂಜಾಬ್ ತಂಡ ಒಂದು ರನ್ ಕಳೆದುಕೊಂಡಿದೆ. ಈ ನಿಯಮ ತಕ್ಷಣವೇ ಬದಲಾಗಬೇಕಿದೆ. ಐಪಿಎಲ್‌ನಲ್ಲಿ ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮ ಇರುವಂತೆ, ಡಿಆರ್‌ಎಸ್ ರಿವರ್ಸಲ್ ಆದಾಗ ರನ್ ನೀಡುವುದಕ್ಕೂ ವಿಶೇಷ ನಿಯಮ ತರಬೇಕು. ಐಸಿಸಿ ತಡ ಮಾಡಿದರೂ ಪರವಾಗಿಲ್ಲ, ಐಪಿಎಲ್ ಈ ಬದಲಾವಣೆಯನ್ನು ಮಾಡಿಕೊಳ್ಳಲಿ” ಎಂದು ಬರೆದುಕೊಂಡಿದ್ದಾರೆ.








