ನವದೆಹಲಿ:ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನ್ಯಾಯಾಧೀಶರ ವಿರುದ್ಧ ಅವಹೇಳನಕಾರಿ ಪೋಸ್ಟ್‌ಗಳು ಮತ್ತು ಹೇಳಿಕೆಗಳನ್ನು ನೀಡಿದ ಹಿನ್ನೆಲೆಯಲ್ಲಿ, ಎಎಪಿ ನಾಯಕರ ವಿರುದ್ಧ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು ನೋಟಿಸ್ ಜಾರಿ ಮಾಡಿದ್ದಾರೆ. ನ್ಯಾಯಾಧೀಶರ ವಿರುದ್ಧ ಸಾರ್ವಜನಿಕವಾಗಿ ಇಂತಹ ಆಧಾರರಹಿತ ಆರೋಪಗಳನ್ನು ಮಾಡುವುದರಿಂದ ನ್ಯಾಯಾಂಗದ ಘನತೆಗೆ ಧಕ್ಕೆ ಬರುತ್ತದೆ ಮತ್ತು ಇದು “ಅರಾಜಕತೆಗೆ” ದಾರಿ ಮಾಡಿಕೊಡುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ.
ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ಪೀಠದಲ್ಲಿ ತಮಗೆ ನ್ಯಾಯ ಸಿಗುವ ಭರವಸೆ ಇಲ್ಲ ಎಂದು ಪತ್ರ ಬರೆದಿದ್ದ ಅರವಿಂದ್ ಕೇಜ್ರಿವಾಲ್, ತಾನು ಇನ್ನು ಮುಂದೆ ಈ ಪೀಠದ ವಿಚಾರಣೆಯಲ್ಲಿ ಪಾಲ್ಗೊಳ್ಳುವುದಿಲ್ಲ ಮತ್ತು ಮಹಾತ್ಮಾ ಗಾಂಧೀಜಿಯವರಿಂದ ಪ್ರೇರಿತರಾಗಿ “ಸತ್ಯಾಗ್ರಹ” ನಡೆಸುವುದಾಗಿ ತಿಳಿಸಿದ್ದರು. ಮನೀಶ್ ಸಿಸೋಡಿಯಾ ಮತ್ತು ದುರ್ಗೇಶ್ ಪಾಠಕ್ ಕೂಡ ಇದೇ ಹಾದಿ ಅನುಸರಿಸುವುದಾಗಿ ಹೇಳಿದ್ದರು.
ಈ ಹಿಂದೆ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುವಂತೆ (Recusal) ಎಎಪಿ ನಾಯಕರು ಮಾಡಿದ ಮನವಿಯನ್ನು ನ್ಯಾಯಮೂರ್ತಿಗಳು ತಿರಸ್ಕರಿಸಿದ್ದರು. ಆಧಾರರಹಿತ ಆರೋಪಗಳ ಮೇಲೆ ಇಂತಹ ಮನವಿಗಳನ್ನು ಒಪ್ಪಿಕೊಂಡರೆ ಅದು ಅಪಾಯಕಾರಿ ಮುನ್ಸೂಚನೆಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.
ವ್ಯವಸ್ಥಿತ ಸಂಚಿನ ಆರೋಪ: ವಿಚಾರಣೆಯ ಸಮಯದಲ್ಲಿ ನ್ಯಾಯಮೂರ್ತಿ ಶರ್ಮಾ ಅವರು ತಮ್ಮ ವಿರುದ್ಧ ನಡೆಯುತ್ತಿರುವ “ಸಂಘಟಿತ ಅಭಿಯಾನ”ವನ್ನು ಕಟುವಾಗಿ ಟೀಕಿಸಿದರು.
ಪತ್ರಗಳು, ಎಡಿಟ್ ಮಾಡಿದ ವೀಡಿಯೊಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮನ್ನು ಗುರಿಯಾಗಿಸಿಕೊಂಡು ಬೆದರಿಸುವ ತಂತ್ರ ರೂಪಿಸಲಾಗಿದೆ ಎಂದು ಅವರು ಹೇಳಿದರು. ಅಷ್ಟೇ ಅಲ್ಲದೆ, ತಮ್ಮ ಕುಟುಂಬದ ಸದಸ್ಯರನ್ನು ಈ ವಿವಾದಕ್ಕೆ ಎಳೆದು ತರುವ ಮೂಲಕ ನ್ಯಾಯಾಲಯದ ಮೇಲೆ ಒತ್ತಡ ಹೇರಲು ಪ್ರಯತ್ನಿಸಲಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
“ನನ್ನ ಮೌನವನ್ನು ನನ್ನ ದೌರ್ಬಲ್ಯ ಎಂದು ತಪ್ಪಾಗಿ ಭಾವಿಸಲಾಗಿತ್ತು. ಆದರೆ ಅದು ದೌರ್ಬಲ್ಯವಲ್ಲ,” ಎಂದು ನ್ಯಾಯಮೂರ್ತಿಗಳು ಗುಡುಗಿದ್ದಾರೆ. ಈ ರೀತಿಯ ಮಾನಸಿಕ ಒತ್ತಡ ಹೇರುವುದು ನ್ಯಾಯಾಂಗ ವ್ಯವಸ್ಥೆಯನ್ನು ಅಸ್ಥಿರಗೊಳಿಸುವ “ಸಾಂವಿಧಾನಿಕ ಗಾಯ” ಎಂದು ಅವರು ಬಣ್ಣಿಸಿದ್ದಾರೆ.








