ನವದೆಹಲಿ:ಮುಂದಿನ ತಿಂಗಳು ಶ್ರೀಲಂಕಾದಲ್ಲಿ ಆರಂಭವಾಗಲಿರುವ ಭಾರತ ‘ಎ’, ಶ್ರೀಲಂಕಾ ‘ಎ’ ಮತ್ತು ಅಫ್ಘಾನಿಸ್ತಾನ ‘ಎ’ ತಂಡಗಳ ನಡುವಿನ ಏಕದಿನ ತ್ರಿಕೋನ ಸರಣಿಗೆ ಭಾರತದ 15 ಸದಸ್ಯರ ಬಲಿಷ್ಠ ತಂಡವನ್ನು ಘೋಷಿಸಲಾಗಿದೆ. ಐಪಿಎಲ್ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಅಬ್ಬರಿಸುತ್ತಿರುವ ಯುವ ಆಟಗಾರರಿಗೆ ಈ ತಂಡದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಸ್ಟಾರ್ ಬ್ಯಾಟರ್ ತಿಲಕ್ ವರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ. ರಾಜಸ್ಥಾನ್ ರಾಯಲ್ಸ್ ನಾಯಕ ರಿಯಾನ್ ಪರಾಗ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಪರ ಐಪಿಎಲ್‌ನಲ್ಲಿ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವದಾಖಲೆ ಬರೆದಿದ್ದ 15 ವರ್ಷದ ವೈಭವ್ ಸೂರ್ಯವಂಶಿ ಇದೇ ಮೊದಲ ಬಾರಿಗೆ ಭಾರತ ‘ಎ’ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಅಂಡರ್-19 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಸೂರ್ಯವಂಶಿ, ಈಗ ಹಿರಿಯರ ತಂಡದ ಹೊಸ್ತಿಲಲ್ಲಿದ್ದಾರೆ.
ಮುಂಬೈ ಇಂಡಿಯನ್ಸ್ ಸ್ಟಾರ್ ಆಟಗಾರ ತಿಲಕ್ ವರ್ಮಾ ಅವರಿಗೆ ತಂಡದ ಜವಾಬ್ದಾರಿ ನೀಡಲಾಗಿದ್ದು, ರಿಯಾನ್ ಪರಾಗ್ ಅವರಿಗೆ ಸಾಥ್ ನೀಡಲಿದ್ದಾರೆ.ದೆಹಲಿಯ ಪ್ರಿಯಾಂಶ್ ಆರ್ಯ, ಆಯುಷ್ ಬದೋನಿ, ನಿಶಾಂತ್ ಸಿಂಧು ಮತ್ತು ವಿಕೆಟ್ ಕೀಪರ್ ಬ್ಯಾಟರ್ ಪ್ರಭ್‌ಸಿಮ್ರಾನ್ ಸಿಂಗ್ ತಂಡದಲ್ಲಿರುವ ಇತರ ಪ್ರಮುಖ ಆಕರ್ಷಣೆಗಳು.
ವೇಗದ ಬೌಲಿಂಗ್‌ನಲ್ಲಿ ಅನ್ಶುಲ್ ಕಾಂಬೋಜ್, ಯಶ್ ಠಾಕೂರ್ ಮತ್ತು ಅರ್ಶದ್ ಖಾನ್ ಆಯ್ಕೆಯಾಗಿದ್ದಾರೆ. ಸ್ಪಿನ್ ವಿಭಾಗವನ್ನು ಹರ್ಷ್ ದುಬೆ ಮತ್ತು ವಿಪ್ರಾಜ್ ನಿಗಮ್ ನಿರ್ವಹಿಸಲಿದ್ದಾರೆ.
ಭಾರತ ‘ಎ’ ತಂಡ ಇಂತಿದೆ:
ತಿಲಕ್ ವರ್ಮಾ (ನಾಯಕ), ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ರಿಯಾನ್ ಪರಾಗ್ (ಉಪನಾಯಕ), ಆಯುಷ್ ಬದೋನಿ, ನಿಶಾಂತ್ ಸಿಂಧು, ಹರ್ಷ್ ದುಬೆ, ಸೂರ್ಯಾಂಶ್ ಶೇಡ್ಗೆ, ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ವಿಪ್ರಾಜ್ ನಿಗಮ್, ಯಶ್ ಠಾಕೂರ್, ಯುದ್ಧವೀರ್ ಸಿಂಗ್, ಅನ್ಶುಲ್ ಕಾಂಬೋಜ್, ಅರ್ಶದ್ ಖಾನ್.








